
ಕಾರವಾರ: ರಾಜ್ಯ ಗಡಿಯಾಗಿರುವ ಮಾಜಾಳಿ ಚೆಕ್ ಪೋಸ್ಟ್‌ನಲ್ಲಿ ಲಾರಿ ಚಾಲಕನಿಗೆ ಅಬಕಾರಿ ಸಿಬ್ಬಂಧಿ ಥಳಿಸಿರುವ ಬಗ್ಗೆ ಲಾರಿ ಚಾಲಕರೊಬ್ಬರು ವಿಡಿಯೊ ಮಾಡಿ ವೈರಲ್ ಮಾಡಿದ್ದಾರೆ.
(ಸುದ್ದಿ ಸಂಪೂರ್ಣ ಓದಿ ವಿಡಿಯೋ ನೋಡಿ)
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕು ಕರ್ನಾಟಕ ರಾಜ್ಯದ ಗಡಿ ತಾಲೂಕಾಗಿದ್ದು, ಗಡಿ ದಾಟಿದ ನಂತರ ಗೋವಾ ರಾಜ್ಯದ ಗಡಿ ಪ್ರಾರಂಭವಾಗುತ್ತದೆ. ಕಾರವಾರದ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್ ಪೋಸ್ಟ್ ಇದೆ. ಗೋವಾದಿಂದ ಬರುವ ವಾಹನಗಳನ್ನು ನಿಲ್ಲಿಸಿ ತಪಾಸಣೆಗೆ ಒಳಪಡಿಸಲಾಗುತ್ತದೆ. ವಾಹನದಲ್ಲಿ ಗೋವಾ ಸಾರಾಯಿ ಅಥವಾ ಇನ್ನಿತರ ಮಾದಕ ವಸ್ತುಗಳು ಕಂಡು ಬಂದಲ್ಲಿ ಅಂಥಹ ವಾಹನಗಳನ್ನು ಜಪ್ತು ಪಡಿಸಿ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾರ್ಯಕ್ಕೆ ಅಬಕಾರಿ ಇಲಾಖೆ ಸಿಬ್ಬಂಧಿ, ಪೊಲೀಸ್ ಸಿಬ್ಬಂಧಿ, ಅರಣ್ಯ ಇಲಾಖೆ ಸಿಬ್ಬಂಧಿ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ನೇಮಿಸಲಾಗಿದೆ. ಆದರೂ ಗೋವಾದಿಂದ ಅಕ್ರಮ ಸಾರಾಯಿ ಉತ್ತರ ಕನ್ನಡ ಜಿಲ್ಲೆಗೆ ತಲುಪುತ್ತದೆ. ಇದು ಕೆಲ ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ನಡೆಯುವ ಕಾರ್ಯ.
ಆದರೆ ಕೆಲ ಅಮಾಯಕ ಜನರಿಗೆ ತಡೆದು ತಪಾಸಣೆ ಹೆಸರಿನಲ್ಲಿ ವಿನಾಕಾರಣ ತೊಂದರೆ ಕೊಡುವುದು, ದಾಖಲೆಗಳು ಸರಿಯಾಗಿಲ್ಲ ಎಂದು ಗದರಿಸಿ ಹಣ ಪೀಕುವ ಕಾರ್ಯ ಈ ಚೆಕ್ ಪೋಸ್ಟ್ ನಲ್ಲಿ ನಡೆಯುತ್ತಿರುವ ಬಗ್ಗೆ ಆರೋಪಗಳು ಆಗಾಗ ಕೇಳಿಬರುತ್ತಿವೆ. ಇಂತಹದೊಂದು ಆರೋಪ ಲಾರಿ ಚಾಲಕರೊಬ್ಬರು ಮೊಬೈಲ್ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಅಕ್ಟೋಬರ್ 15 ರಂದು ತಾನು ಗೋವಾದಿಂದ ಕೇರಳ ರಾಜ್ಯಕ್ಕೆ ಹೋಗಲು ಗೋವಾ ಗಡಿ ದಾಟಿ ಕರ್ನಾಟಕದ ಗಡಿ ಪ್ರವೇಶಿಸುವಾಗ
ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ತನ್ನನ್ನು ಅಬಕಾರಿ ಸಿಬ್ಬಂಧಿ ತಡೆದು ವಾಹನದಲ್ಲಿ ಏನಿದೆ ನೋಡಬೇಕು ಎಂದು ಹೇಳಿದ್ದಾರೆ. ವಾಟರ್ ಫಿಲ್ಟರ್ ವಸ್ತುಗಳು ಇರುವುದಾಗಿ ತಾನು ಹೇಳಿದ್ದೇನೆ. ಮಳೆ ಸುರಿಯುತ್ತಿರುವುದರಿಂದ ವಾಹನದಲ್ಲಿನ ವಸ್ತುಗಳಿಗೆ ನೀರು ತಾಗಬಾರದೆಂಬ ಕಾರಣಕ್ಕೆ ದಪ್ಪ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ಹಗ್ಗದಿಂದ ಗಟ್ಟಿಯಾಗಿ ಕಟ್ಟಲಾಗಿತ್ತು. ಅದನ್ನು ಬಿಚ್ಚಲು ಹೇಳಿದ್ದಕ್ಕೆ ತನ್ನೊಬ್ಬನಿಂದ ಬಿಚ್ಚಲು ಸಾಧ್ಯವಾಗುವುದಿಲ್ಲ. ತಾವು ಬಿಚ್ಚಿ ನೋಡಬಹುದು ಎಂದು ತಾನು ಉತ್ತರಿಸಿದ್ದಕ್ಕೆ ತನ್ನ ಕಪಾಳಕ್ಕೆ ಹೊಡೆದರು. ಹಾಗು ಕಚೇರಿಗೆ ಕರೆದೊಯ್ದು ಮೂರು ಜನ ಸೇರಿ ಥಳಿಸಿದ್ದಾರೆ. ತನ್ನ ಲೈಸನ್ಸ್, ವಾಹನ ಡಾಕ್ಯುಮೆಂಟ್ ವಶಕ್ಕೆ ತೆಗೆದುಕೊಂಡರು, ಹಾಗು ನಿಂದನೆ ಮಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ತನ್ನನ್ನು ತಡೆಹಿಡಿದಿದ್ದಾರೆ. ಎಂದು ಚಾಲಕ ವಿಡಿಯೋದಲ್ಲಿ ವಿವರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಮಾಯಕ ಲಾರಿ ಚಾಲಕನಿಗೆ ಥಳಿಸಿದ್ದು ನಿಜವಾಗಿದ್ದರೆ ತಪ್ಪು ಮಾಡಿರುವ ಅಬಕಾರಿ ಸಿಬ್ಬಂಧಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಕಾಮೆಂಟ್ ಮಾಡುವ ಮೂಲಕ ಆಗ್ರಹಿಸುತ್ತಿದ್ದಾರೆ.