
ತಂದೆ ಕೊಂದ ಆರೋಪಿಗೆ 5 ವರ್ಷ ಜೈಲು
ಕಾರವಾರ: ಅನಾವಶ್ಯವಾಗಿ ತಿರುಗದೇ ಕೆಲಸಕ್ಕೆ ಹೋಗುವಂತೆ ಮಗನಿಗೆ ಬುದ್ದಿವಾದ ಹೇಳಿದ ತಂದೆಯನ್ನೇ ಕೊಲೆ ಮಾಡಿದ ಆರೋಪಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಎಸ್ ವಿಜಯಕುಮಾರ್ ಆದೇಶ ಮಾಡಿದ್ದಾರೆ. ಹೊನ್ನಾವರ ಕರ್ಕಿ ಗ್ರಾಮದ ತೊಪ್ಪಲಕೇರಿಯ ಭರತ್ ಪಾಂಡುರಂಗ ಮೇಸ್ತ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.
ಈತ ಏ.21, 2023 ರಲ್ಲಿ ಮನೆಯ ಕೆಲಸವನ್ನು ಮಾಡದೆ ಊರಿನಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದಾಗ ಈತನ ತಂದೆ ಪಾಂಡುರಂಗ ಶೇಷಯ್ಯ ಮೇಸ್ತ ಎಲ್ಲಿಯಾದರೂ ಕೆಲಸಕ್ಕೆ ತೆರಳುವಂತೆ ತಿಳಿಸಿದ್ದರು. ಆದರೂ ಮತ್ತೆ ಸುತ್ತಾಡುತ್ತಿದ್ದ ಆರೋಪಿಯೂ ಒಂದು ದಿನ ಮನೆಯಿಂದ ಹೊರಗೆ ಹೋಗುವುದನ್ನು ತಡೆದಾಗ ಸಿಟ್ಟಿಗೆದ್ದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಅದರಂತೆ ವಿಚಾರಣೆ ನಡೆಸಿ ನ್ಯಾಯಾಲಯ 23 ಸಾಕ್ಷಿದಾರರನ್ನು ಹಾಗೂ 83 ದಾಖಲೆಗಳನ್ನು ಗುರುತಿಸಿ ಈ ಮೇಲಿನ ತೀರ್ಪು ನೀಡಿ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭೀಯೋಜಕಿ ತನುಜಾ ಬಿ. ಹೊಸಪಟ್ಟಣ ವಾದಿಸಿದ್ದರು.