ನೌಕಾನೆಲೆ ಸಿಬ್ಬಂದಿ ಗೂಂಡಾಗಿರಿ ಸರಿಯಲ್ಲ: ಗಣಪತಿ ಉಳ್ವೇಕರ್ ಆಕ್ರೋಶ
ನೌಕಾನೆಲೆ ಸಿಬ್ಬಂದಿ ಗೂಂಡಾಗಿರಿ ಸರಿಯಲ್ಲ: ಗಣಪತಿ ಉಳ್ವೇಕರ್ ಆಕ್ರೋಶ

ನೌಕಾನೆಲೆ ಸಿಬ್ಬಂದಿ ಗೂಂಡಾಗಿರಿ ಸರಿಯಲ್ಲ: ಗಣಪತಿ ಉಳ್ವೇಕರ್ ಆಕ್ರೋಶ
ಕಾರವಾರ: ಓರ್ವ ಅಯ್ಯಪ್ಪ ಮಾಲಾಧಾರಿ ಮೇಲೆ 20 ಮಂದಿ ನೌಕಾನೆಲೆ ಸಿಬ್ಬಂದಿ ಸೇರಿ ಹಲ್ಲೆ ಮಾಡಿರುವುದು ಖಂಡನೀಯ, ಮುಂದಿನ ದಿನಗಳಲ್ಲಿ ಈ ರೀತಿ ದುರ್ವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಆಗ್ರಹಿಸಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಪಘಾತದಲ್ಲಿ ಗಾಯಗೊಂಡು, ಚಿಕಿತ್ಸೆ ಪಡೆದು ತೆರಳುತ್ತಿದ್ದ ವೇಳೆ ಅಯ್ಯಪ್ಪ ಮಾಲಾಧಾರಿಯನ್ನು ಅಡ್ಡಗಟ್ಟಿ ನೌಕಾನೆಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಮತ್ತು ನೌಕಾನೆಲೆ ಅಧಿಕಾರಿಗಳು ಕೂಡಲೇ ಈ ಕುರಿತು ಸಭೆ ನಡೆಸಿ ಮುಂದಿನ ದಿನದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ನೌಕಾನೆಲೆ ಸಿಬ್ಬಂದಿಯ ಗೂಂಡಾಗಿರಿ ವರ್ತನೆ ಹೆಚ್ಚಾಗುತ್ತಿದೆ. ಸ್ಥಳೀಯ ಪೊಲೀಸರು, ಆಡಳಿತಕ್ಕೆ ಯಾವುದೇ ಬೆಲೆ ಕೊಡದ ಅವರು, ತಮ್ಮದೇ ಪ್ರತ್ಯೇಕ ಕಾನೂನು ಎಂಬಂತೆ ವರ್ತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಮೀನುಗಾರರು ಹಿಂದಿನಿಂದಲೂ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿಕೊಂಡು ಬರುತ್ತಿದ್ದಾರೆ. ನೌಕಾನೆಲೆ ಸ್ಥಾಪನೆಯಾದ ಬಳಿಕ ಅವರು ಗುರುತಿಸಿಕೊಟ್ಟ ಪ್ರದೇಶದ ಹೊರಗೇ ಮೀನುಗಾರಿಕೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಗಾಳಿಯ ರಭಸಕ್ಕೆ ಬಲೆಗಳು ನೌಕಾನೆಲೆ ವ್ಯಾಪ್ತಿಯೊಳಗೆ ಎಳೆದುಹೋಗಿರಬಹುದು. ಆದರೆ ಈ ಕಾರಣಕ್ಕೇ ನೌಕಾನೆಲೆ ಸಿಬ್ಬಂದಿ ಬಲೆ ತುಂಡರಿಸುವುದು, ಬೋಟ್ ಮುಳುಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಬಳಿಕ ವಕೀಲರಾದ ನಾಗರಾಜ ನಾಯಕ ಮಾತನಾಡಿ, ನಾವು ಮೀನುಗಾರಿಕೆಗಿದ್ದ ಕಡಲತೀರ, ಜಮೀನುಗಳನ್ನು ಇಂತಹ ಹಲ್ಲೆಕೋರರಿಗೆ ಬಿಟ್ಟುಕೊಟ್ಟಿದ್ದಲ್ಲ, ದೇಶ ರಕ್ಷಣೆ ಮಾಡುವ ರಕ್ಷಕರಿಗೆಂದು ಬಿಟ್ಟುಕೊಟ್ಟಿದ್ದೇವೆ. ನಿಮ್ಮ ದೃಷ್ಟಿಯಲ್ಲಿ ದೇಶದ ಗಡಿಯಲ್ಲಿ ಹೋರಾಡುವುದಷ್ಟೇ ಸೈನಿಕರ ಕೆಲಸ ಆಗಿರಬಹುದು. ಆದರೆ ಇದರಲ್ಲಿ ದೇಶದ ಒಳಗಿದ್ದವರೂ ಸೇರುತ್ತಾರೆ. ಹೀಗಿರುವಾಗ ಈ ರೀತಿ ಜನಸಾಮಾನ್ಯರ ಮೇಲೆ ಹಲ್ಲೆ ನಡೆಸುವ ನಿಮ್ಮನ್ನು ದೇಶರಕ್ಷಕರು ಎಂದು ಕರೆಯಬೇಕಾ? ಎಂದು ಪ್ರಶ್ನಿಸಿದರು.
ದೇಶದ ಪೊಲೀಸರು, ಇಲ್ಲಿನ ಕಾನೂನು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಭ್ರಮೆಯಲ್ಲಿ ನೌಕಾನೆಲೆ ಸಿಬ್ಬಂದಿ ಇದ್ದಾರೆ. ಆದರೆ ಈ ಭ್ರಮೆಯಿಂದ ಅವರು ಹೊರಬರಬೇಕು. ನೌಕಾನೆಲೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ತಮ್ಮ ಸಿಬ್ಬಂದಿಗೆ ಕಾನೂನು ತಿಳಿಹೇಳಬೇಕು. ಏನು ಮಾಡಿದರೂ ನಡೆಯುತ್ತದೆ ಎನ್ನುವ ಭ್ರಮೆಯನ್ನು ಹೋಗಲಾಡಿಸಬೇಕಾದ ಕೆಲಸವನ್ನು ನೌಕಾನೆಲೆ ಹಿರಿಯ ಅಧಿಕಾರಿಗಳು ಮಾಡಬೇಕು ಎಂದರು.
ನೌಕಾನೆಲೆಯವರು ತಮ್ಮ ಸಿಬ್ಬಂದಿ ಪರವಾಗಿ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರ ವಿರುದ್ಧ ಗಂಭೀರ ದೂರು ನೀಡಿದ್ದಾರೆ. ನೌಕಾಸಿಬ್ಬಂದಿ ತಪ್ಪು ಇಲ್ಲ ಎಂದಾದಲ್ಲಿ, ನಿಮ್ಮ ಸಿಬ್ಬಂದಿಯನ್ನು ಅಮಾನತು ಮಾಡಿರುವುದು ಏಕೆ?. ಮೊದಲು ನೌಕಾನೆಲೆ ಸಿಬ್ಬಂದಿ ನಾಗರೀಕರಾಗುವುದನ್ನು ಕಲಿಯಿರಿ, ಒಬ್ಬ ಅಯ್ಯಪ್ಪ ಸ್ವಾಮಿ ಭಕ್ತನ ಮೇಲೆ ಹಲ್ಲೆ ನಡೆಸಲು 20 ಮಂದಿ ಸೇರಿಕೊಂಡಿದ್ದು ಯಾವ ಪೌರುಷ? ನಾಚಿಕೆಯಾಗಬೇಕು ನಿಮಗೆ ಎಂದು ಆಕ್ರೋಶ ಹೊರಹಾಕಿದರು.
ಈ ಪ್ರಕರಣದಲ್ಲಿ ಪೊಲೀಸರಿಂದಲೂ ತಪ್ಪಾಗಿದೆ. ಈ ರೀತಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದವರನ್ನು ಸ್ಟೇಷನ್ ಬೇಲ್ ಸಿಗುವ ರೀತಿ ಸೆಕ್ಷನ್ ಹಾಕಿ ಬಿಟ್ಟು ಕಳುಹಿಸಿರುವುದು ಎಷ್ಟು ಸರಿ. ಜನಸಾಮಾನ್ಯರು ಈ ರೀತಿ ಪ್ರಕರಣದಲ್ಲಿ ಬಂದಿದ್ದರೆ ಬಿಟ್ಟು ಕಳುಹಿಸುತ್ತಿದ್ದರಾ? ಎಂದರು. ನೌಕಾನೆಲೆ ಸ್ಥಾಪನೆಗಾಗಿ ರಸ್ತೆ, ಜಮೀನು, ಉದ್ಯೋಗ ಕಳೆದುಕೊಂಡವರ ಮೇಲೆ ಮತ್ತೆ ಎಫ್‌ಐಆರ್ ಹಾಕಿದ್ದಾರೆ. ಹಲ್ಲೆ ಮಾಡಿದವನನ್ನು ಬಿಟ್ಟು ಕಳುಹಿಸಿದ್ದಾರೆ, ಹೊಡೆತ ತಿಂದವನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದು ಯಾವ ನ್ಯಾಯ ಸ್ವಾಮಿ. ಜನರ ಭಾವನೆಗಳ ಜೊತೆ ಆಟವಾಡಬೇಡಿ, ಮುಂದಿನ ದಿನಗಳಲ್ಲಿ ಜನ ರೊಚ್ಚಿಗೇಳುತ್ತಾರೆ. ನಮಗೆ ನೌಕಾನೆಲೆ ವರ್ಸಸ್ ಕಾರವಾರ ಆಗುವುದು ನಮಗೆ ಬೇಡ, ಪುಂಡರು ವರ್ಸಸ್ ಕಾರವಾರ ಬೇಕಾದರೆ ಆಗಲಿ ಎಂದು ಎಚ್ಚರಿಕೆ ನೀಡಿದರು.