Uncategorized

ಕಲಬೆರಕೆ ತುಪ್ಪ ಮಾರಾಟ ಆರೋಪ: ವ್ಯಾಪಾರಿ ವಶಕ್ಕೆ ಪಡೆದ ಪೊಲೀಸರು

ಕಲಬೆರಕೆ ತುಪ್ಪ ಮಾರಾಟ ಆರೋಪ: ವ್ಯಾಪಾರಿ ವಶಕ್ಕೆ ಪಡೆದ ಪೊಲೀಸರು

 

ಕುಮಟಾ: ಪಟ್ಟಣದ ಸಿದ್ದನಬಾವಿಯ ಬಳಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವ ವ್ಯಾಪಾರಿಯನ್ನು ಕುಮಟಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೆಲ ವ್ಯಾಪಾರಿಗಳು ತುಪ್ಪ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಜೋನಿ ಬೆಲ್ಲದ ಡಬ್ಬದಲ್ಲಿ ಒಂದು ಲೀಟರ್ ತುಪ್ಪವನ್ನು 400 ರೂ.ಯಿಂದ 600 ರೂ. ವರೆಗೂ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ತುಪ್ಪ ಖರೀದಿಸಿ ಬಳಸಿದ ಕೆಲವರು ಇದು ಶುದ್ಧ ತುಪ್ಪವಲ್ಲ. ಕಲಬೆರಕೆ ತುಪ್ಪ ಎಂದು ಆರೋಪಿಸಿದ್ದಾರೆ.

ಅದರಂತೆ ಸಿದ್ದನಬಾವಿಯಲ್ಲಿ ಮತ್ತೆ ಇದೇ ವ್ಯಾಪಾರಿಗಳು ತುಪ್ಪ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ತುಪ್ಪು ಖರೀಧಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರ ದೂರಿನ ಮೇರೆಗೆ ಬಳ್ಳಾರಿ ಮೂಲದ ಶಂಕರಪ್ಪ ಎನ್ನುವ ವ್ಯಾಪಾರಿಯನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಈ ತುಪ್ಪದ ಗುಣಮಟ್ಟವನ್ನು ಪರಿಕ್ಷೀಸಲು ಪೊಲೀಸ್ ಇನ್ಸ್ಪೆಕ್ಟರ್ ಯೋಗೇಶ್ ಅವರು, ಆಹಾರ ಸುರಕ್ಷತಾ ಮತ್ತು ಭದ್ರತಾ ಪ್ರಾಧಿಕಾರದ ಅಧಿಕಾರಿ ಅರುಣ ಕಾಶಿ ಭಟ್ ಅವರಿಗೆ ಮಾಹಿತಿ ನೀಡಿದ್ದಾರೆ.

ಶಿರಸಿಯಿಂದ ಠಾಣೆಗೆ ಆಗಮಿಸಿದ ಅರುಣ ಅವರು ಈ ತುಪ್ಪವನ್ನು ಪರಿಶೀಲಿಸಿ, ಮೇಲ್ನೋಟಕ್ಕೆ ಈ ತುಪ್ಪದ ಡಬ್ಬದ ಮೇಲೆ ಯಾವುದೇ ಲೇಬಲ್ ಇಲ್ಲ. ಲೇಬಲ್ ಇಲ್ಲದ ಮಿಸ್ ಬ್ರಾಂಡೆಡ್ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನು ರೀತಿಯಲ್ಲಿ ತಪ್ಪು. ಹಾಗಾಗಿ ಈ ತುಪ್ಪದ ಗುಣಮಟ್ಟದ ಪರಿಶೀಲನೆಗೆ ಬೆಳಗಾವಿಯ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಇದರ ವರದಿ ಬರಲು 14 ದಿನಗಳು ಬೇಕು. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಇನ್ನು ಈ ಕಲಬೆರಕೆ ತುಪ್ಪ ಮಾರಾಟ ಮಾಡುವ ತಂಡವೊಂದು ಜಿಲ್ಲಾದ್ಯಂತ ಕಾರ್ಯಾಚರಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಏಳೆಂಟು ಜನರ ತಂಡ ಹೊನ್ನಾವರದ ಖಾಸಗಿ ಹೋಟೆಲ್‌ವೊಂದರಲ್ಲಿ ಉಳಿದುಕೊಂಡು ತುಪ್ಪಕ್ಕೆ ಡಾಲ್ದಾ ಮಿಶ್ರಣ ಮಾಡಿ, ಪರಿಶುದ್ಧ ಸಾವಯವ ತುಪ್ಪ ಎಂದು ಜನರ ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಹೀಗೆ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿರುವ ವ್ಯಾಪಾರಿಯೊಬ್ಬರು ಈಗ ಕುಮಟಾ ಪೊಲೀಸರ ಅತಿಥಿಯಾಗಿದ್ದು, ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆದ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!