ಒಂದು ಲಕ್ಷದ ಸಾಲಕ್ಕೆ 12 ಲಕ್ಷ ರೂ ಬಡ್ಡಿ ವಸೂಲಿ: ದಂಧೆಕೋರನ ಬಂಧನ
ಒಂದು ಲಕ್ಷದ ಸಾಲಕ್ಕೆ 12 ಲಕ್ಷ ರೂ ಬಡ್ಡಿ ವಸೂಲಿ: ದಂಧೆಕೋರನ ಬಂಧನ

ಮುಂಡಗೋಡ: 1.20 ಲಕ್ಷ ರೂ ಕೈಗಡ ಸಾಲ ಪಡೆದು, ಬಡ್ಡಿ ರೂಪದಲ್ಲಿ 12 ಲಕ್ಷ ರೂ. ಪಾವತಿಸಿದ್ದಾರೆ. ಅದಾಗಿಯೂ ಅವರ ಸಾಲ ತೀರದ ಕಾರಣ ಅವರ ಬಳಿಯಿದ್ದ ಟ್ಯಾಕ್ಟರನ್ನು ಸಾಲ ಕೊಟ್ಟವರು ಎಳೆದೊಯ್ದಿದ್ದರು. ಇದೀಗ ಮೀಟರ್ ಬಡ್ಡಿ ಮೇಲೆ ಪೊಲೀಸರು ನಿಯಂತ್ರಣ ಹೇರುತ್ತಿರುವುದು ಅರಿವಿಗೆ ಬಂದ ಬಳಿಕ ಸಂತ್ರಸ್ಥರು ಪೊಲೀಸ್ ಮೊರೆ ಹೋಗಿದ್ದಾರೆ.
ಮುಂಡಗೋಡಿನ ಇಂದೂರು ಬಳಿಯ ಸಂಜಯನಗರದ ಮಹೇಶ ದೊಡ್ಡಮನಿ ಅವರಿಗೆ ದುಡ್ಡಿನ ಸಮಸ್ಯೆಯಾಗಿತ್ತು. ಈ ಹಿನ್ನಲೆ ಅವರು ಕಿಲ್ಲೇ ಓಣಿ ಬಳಿ ವೆಲ್ಡಿಂಗ್ ಕೆಲಸ ಮಾಡುವ ಜಹೀರ ಶಬ್ಬಿರ ಶೇಖ್ ಬಳಿ 40 ಸಾವಿರ ರೂ. ಕೈಗಡ ಪಡೆದಿದ್ದರು. ಇದೇ ವೇಳೆ ಹಣ್ಣಿನ ವ್ಯಾಪಾರಿ ಕರೀಂಖಾನ್ ಬಳಿಯೂ 80 ಸಾವಿರ ರೂ ಸಾಲ ಪಡೆದಿದ್ದರು.
ಆದರೆ ಸಕಾಲದಲ್ಲಿ ಆ ಸಾಲ ಮರುಪಾವತಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಲ ಕೊಟ್ಟವರು `ಪ್ರತಿ ವಾರ 11 ಸಾವಿರ ರೂ ಬಡ್ಡಿ ಪಾವತಿಸಬೇಕು’ ಎಂದು ಸೂಚಿಸಿದ್ದರು. ಅದರ ಪ್ರಕಾರ ಹೆಚ್ಚುಕಮ್ಮಿ ಎರಡು ವರ್ಷಗಳ ಕಾಲ ಬಡ್ಡಿ ತುಂಬಿದ ಮಹೇಶ ದೊಡ್ಮನಿ ಒಟ್ಟು 12 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದ್ದರು.
ಅದಾಗಿಯೂ 3.80 ಲಕ್ಷ ರೂ. ಬಾಕಿಯಿರುವುದಾಗಿ ಸಾಲ ಕೊಟ್ಟವರು ಹೇಳಿಕೊಂಡಿದ್ದು, ಅದನ್ನು ಪಾವತಿಸುವಂತೆ ದುಂಬಾಲು ಬಿದ್ದಿದ್ದರು. 2023ರ ಜುಲೈ 19 ರಂದು ಸಾಲಗಾಂವಿನ ಮಂಜುನಾಥ ಖಾಜಗಾರ, ಮಸ್ತಬದಾನಿಯ ಶಬ್ಬಿರ ಸತ್ತರಸಾಬ್, ಚೌಡಳ್ಳಿಯ ರಫಿಕ್ ಜಮಖಂಡಿ ಹಾಗೂ ಇಸ್ಮಾಯಲ್ ಎಂಬಾತರು ಮಹೇಶ ದೊಡ್ಮನಿ ಅವರ ಮನೆಗೆ ನುಗ್ಗಿ ಹಣದ ವಿಷಯವಾಗಿ ಗಲಾಟೆ ಮಾಡಿದ್ದರು. ಮಹೇಶ ದೊಡ್ಮನಿ ಅವರ ತಾಯಿಗೆ ನಿಂದಿಸಿ, ದೊಡ್ಮನಿ ಅವರ ಕಪಾಳಕ್ಕೆ ಬಾರಿಸಿದ್ದರು. 3.80 ಲಕ್ಷ ರೂ ಪಾವತಿ ಮಾಡದ ಹಿನ್ನಲೆ ಮಹೇಶ ದೊಡ್ಮನಿ ಅವರ ಬಳಿಯಿದ್ದ ಸ್ವರಾಜ್ ಕಂಪನಿಯ ಟ್ಯಾಕ್ಟರನ್ನು ಕೊಂಡೊಯ್ದಿದ್ದರು.
ಪ್ರಸ್ತುತ ಮೀಟರ್ ಬಡ್ಡಿಯಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತರು ಪೊಲೀಸರ ಮೊರೆ ಹೋಗುತ್ತಿರುವುದನ್ನು ಅರಿತ ಮಹೇಶ ದೊಡ್ಮನಿ ಎರಡು ವರ್ಷದ ಹಿಂದೆ ತಮಗೆ ಆದ ನೋವನ್ನು ತೋಡಿಕೊಂಡರು. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಚೌಡಳ್ಳಿಯ ರಫೀಖ್ ಜಮಖಂಡಿ ಎಂಬಾತನನ್ನು ಬಂಧಿಸಿದ್ದಾರೆ. ಉಳಿದವರ ಶೋಧ ಕಾರ್ಯ ನಡೆಸಿದ್ದಾರೆ.