ಹಾರ್ಪಿಕ್ ಕುಡಿದು 13 ದಿನ ಜೀವನ್ಮರಣ ಹೋರಾಟ ನಡೆಸಿದ ಗುತ್ತಿಗೆದಾರ ಸಾವು
ಹಾರ್ಪಿಕ್ ಕುಡಿದು 13 ದಿನ ಜೀವನ್ಮರಣ ಹೋರಾಟ ನಡೆಸಿದ ಗುತ್ತಿಗೆದಾರ ಸಾವು

ಕಾರವಾರ: ವೈಯಕ್ತಿಕ ಕಾರಣದಿಂದ ಹಾರ್ಪಿಕ್ ಕುಡಿದಿದ್ದ ನಗರದ ಬೈತಖೋಲ ನಿವಾಸಿ ಗುತ್ತಿಗೆದಾರ ರವಿ ಶಿರೋಡಕರ್(55), 13 ದಿನದ ನರಳಾಟದ ನಂತರ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ನಗರಸಭೆ ಸೇರಿ ವಿವಿಧ ಸರ್ಕಾರಿ ಕೆಲಸವನ್ನು ಸಹ ಅವರು ಮಾಡಿಕೊಂಡಿದ್ದರು. ಕೆಲಸದ ನಿಮಿತ್ತ ಅನೇಕ ಕಡೆ ಸಾಲವನ್ನು ಸಹ ಹೊಂದಿದ್ದರು.
ಜನವರಿ 28 ರಂದು ಅವರು ಮನೆಯಲ್ಲಿದ್ದ ವೇಳೆ ಹಾರ್ಪಿಕ್ ಕುಡಿದಿದ್ದರು. ತಕ್ಷಣ ಕುಟುಂಬದವರು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಗೋವಾ ಮಡಗಾಂವ್‌ನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಮುಂದೆ ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಗೆ ಕಳುಹಿಸಲಾಯಿತು.
ಸಾಕಷ್ಟು ಚಿಕಿತ್ಸೆ ನೀಡಿದರೂ ರವಿ ಶಿರೂಡಕರ್ ಆರೋಗ್ಯ ಚೇತರಿಕೆಯಾಗಿಲ್ಲವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ರವಿ ಶಿರೋಡಕರ್ ಅವರು ಹಾರ್ಪಿಕ್ ಸೇವನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕಣ್ತಪ್ಪಿನಿಂದ ಅವರು ಹಾರ್ಪಿಕ್ ಸೇವನೆ ಮಾಡಿರುವ ಬಗ್ಗೆ ಕುಟುಂಬದವರು ಅಂದಾಜಿಸಿದ್ದಾರೆ.
- ರವಿ ಶಿರೂಡಕರ್ ಅವರು ಕಾರವಾರ ತಾಲೂಕಾ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದರು. ಗುತ್ತಿಗೆದಾರರ ಸಮಸ್ಯೆ ಬಗ್ಗೆ ಸದಾ ಧ್ವನಿ ಎತ್ತುತ್ತಿದ್ದರು. ಅವರ ನಿಧನದ ಹಿನ್ನಲೆ ಕಾರವಾರ ತಾಲೂಕಾ ಗುತ್ತಿಗೆದಾರರ ಸಂಘ ಸಂತಾಪ ಸೂಚಿಸಿದೆ. ಮಂಗಳವಾರ ರವಿ ಶಿರೋಡಕರ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಮಾಹಿತಿ ನೀಡಿದ್ದಾರೆ.