ಭಕ್ತರ ಸಂಕಷ್ಟ ನಿವಾರಿಸುವ ‘ಮಾಘ ಚತುರ್ಥಿ’: ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆ
ಭಕ್ತರ ಸಂಕಷ್ಟ ನಿವಾರಿಸುವ 'ಮಾಘ ಚತುರ್ಥಿ': ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆ

ಕಾರವಾರ: ಹಿಂದೂ ಧರ್ಮದಲ್ಲಿ ಗಣೇಶ ದೇವರಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಯಾವುದೇ ಕಾರ್ಯಕ್ರಮ ಆರಂಭಿಸುವಾಗ ವಿಘ್ನಗಳು ಬಾರದಿರಲಿ ಎಂದು ವಿಘ್ನವಿನಾಶಕನನ್ನು ನೆನೆಯುತ್ತಾರೆ. ಗಣೇಶ ಚತುರ್ಥಿ ಹೇಗೆ ಸಂಭ್ರಮದಿಂದ ನಡೆಯುತ್ತದೆಯೋ ಹಾಗೇ ಇಂದು ಮಾಘ ಮಾಸದ ಚತುರ್ಥಿಯು ಕೂಡ ಅಷ್ಟೇ ವಿಶೇಷವಾದದ್ದು.
ಹಿಂದೂ ಧರ್ಮದಲ್ಲಿ ಸಂಕಷ್ಟಿಗೆ ವಿಶೇಷವಾದ ಮಹತ್ವವಿದೆ. ಅದರಲ್ಲೂ ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ದಿನದಂದು ಸಂಕಷ್ಟಿಯ ವ್ರತವನ್ನು ಕೈಗೊಂಡರೆ ಇಪ್ಪತ್ತೊಂದು ಸಂಕಷ್ಟಿ ವ್ರತ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೆ ಮಾಘ ಮಾಸದಲ್ಲಿ ಬರುವ ಸಂಕಷ್ಟಿಗೂ ವಿಶೇಷವಾದ ಮಹತ್ವವಿದೆ. ಮಾಘ ಮಾಸ, ಕೃಷ್ಣ ಪಕ್ಷದ ತೃತೀಯ ತಿಥಿಯಂದು ಸಂಕಷ್ಟಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಫೆ.1 ರಂದು ಆಚರಿಸಲಾಗುತ್ತಿದೆ.
ಮಾಘ ಚತುರ್ಥಿ ಹಬ್ಬವನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಚತುರ್ಥಿ ಸಂದರ್ಭದಲ್ಲಿ ನಾನಾ ಕಾರಣಗಳಿಂದ ಹಬ್ಬ ಮಾಡಲು ಸಾಧ್ಯವಾಗದವರು ಹಾಗೂ ಹರಕೆ ಹೊತ್ತುಕೊಂಡವರು ಈ ಮಾಘ ಮಾಸದ ಚತುರ್ಥಿಯಂದು ಒಂದು, ಒಂದೂವರೆ ದಿನದ ಮಟ್ಟಿಗೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಕಾರವಾರ ತಾಲ್ಲೂಕಿನಲ್ಲಿ ಸಾರ್ವಜನಿಕವಾಗಿಯೂ ಮಾಘ ಚೌತಿ ಆಚರಣೆಯ ಪದ್ದತಿ ಸಹ ನಡೆದುಬಂದಿದ್ದು, ಮಾಜಾಳಿಯ ಗಾಂವಗೇರಿಯಲ್ಲಿ ಪ್ರತಿವರ್ಷ ಮಾಘ ಚೌತಿಯಂದು ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಒಂದು ದಿನ ಅದ್ದೂರಿಯಾಗಿ, ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಇನ್ನು ಇದೇ ಮೊದಲ ಬಾರಿಗೆ ಕಾರವಾರ ನಗರದ ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಿಗ್ಗೆಯೇ ತೆರಳಿ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು ತಂದಿದ್ದು, ಮೀನು ಮಾರುಕಟ್ಟೆಯಲ್ಲೇ ಮಂಟಪವನ್ನು ಸ್ಥಾಪಿಸಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲದೇ ಮಾಘ ಚೌತಿ ಪ್ರಯುಕ್ತ ಅನ್ನಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗಿದ್ದು, ನಗರದ ಎಲ್ಲ ಮೀನುಗಾರರೂ ಒಟ್ಟಾಗಿ ಮಾಘ ಚತುರ್ಥಿಯನ್ನು ಆಚರಣೆ ಮಾಡುತ್ತಿದ್ದಾರೆ.
ಮಾಘ ಚೌತಿ ಹಿನ್ನಲೆ ಕಳೆದೊಂದು ವಾರದಿಂದಲೇ ಮೀನು ಮಾರುಕಟ್ಟೆಯನ್ನು ಕಡಲತೀರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇಡೀ ಮಾರುಕಟ್ಟೆಯನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿತ್ತು. ಮಾರುಕಟ್ಟೆಯ ಆವರಣದಲ್ಲಿ ಭವ್ಯವಾದ ಮಂಟಪವನ್ನು ಸ್ಥಾಪಿಸಿ ಹೂವುಗಳಿಂದ ಅಲಂಕಾರ ಮಾಡಿರುವ ಪೀಠದಲ್ಲಿ ವಿಘ್ನ ನಿವಾರಕ ವಿರಾಜಮಾನನಾಗಿದ್ದಾನೆ. ಇಂದು ಸಕಲ ಪೂಜೆಗಳನ್ನು ಸಲ್ಲಿಸಿ ಸಂಜೆಯ ವೇಳೆಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವುದರೊಂದಿಗೆ ಮಾಘ ಚತುರ್ಥಿ ಸಂಪನ್ನಗೊಳ್ಳಲಿದೆ.
ಸಂಕಷ್ಟ ಚತುರ್ಥಿಯ ಮಹತ್ವ: ಸಂತಾನ ಪ್ರಾಪ್ತಿ ಹಾಗೂ ಖುಷಿ ಜೀವನ ನಮ್ಮದಾಗಬೇಕು ಎಂಬ ನಿಟ್ಟಿನಲ್ಲಿ ಸಂಕಲ್ಪ ಮಾಡಿ ಈ ವ್ರತವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ, ಇದರಿಂದ ನಮ್ಮ ಇಷ್ಟಾರ್ಥಗಳು ಪೂರೈಸುತ್ತದೆ ಎಂದೂ ಹೇಳಲಾಗುತ್ತದೆ. ಸಂಕಟವನ್ನು ನಿವಾರಿಸುವ ಗಣೇಶ ಚತುರ್ಥಿ ಎಂದೇ ಇದನ್ನು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಅನುಸಾರ ಸಂಕಷ್ಟ ಚತುರ್ಥಿಯ ದಿನ ಗಣಪತಿಗೆ ಪೂಜೆ ಕೈಗೊಂಡ ಬಳಿಕ ರಾತ್ರಿ ಚಂದ್ರನಿಗೆ ಅರ್ಘ್ಯ ಕೊಟ್ಟು ವ್ರಥವನ್ನು ಸಮಾಪ್ತಿಗೊಳಿಸಲಾಗುತ್ತದೆ. ಈ ಸಂಕಷ್ಟ ವ್ರತವನ್ನು ಮಾಡುವುದರಿಂದ ಗ್ರಹಗಳ ದೋಷವಿದ್ದರೂ ನಿವಾರಣೆಯಾಗಲಿದೆ. ವಿಘ್ನನಿವಾರಕ ಅದನ್ನು ದೂರ ಮಾಡಲಿದ್ದಾನೆ ಎಂಬ ನಂಬಿಕಿಯಿದೆ.
ಮಾಘ ಮಾಸದ ಮಹತ್ವ: ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹನ್ನೊಂದನೇ ಮಾಸ ಮಾಘ ಮಾಸ. ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೆ ಶ್ರೇಷ್ಠವಾದ ಮಾಸವೆಂದು ಹೇಳಲಾಗುತ್ತದೆ. ಪ್ರತಿ ವರ್ಷ ಮಾಘಮಾಸದಲ್ಲಿ ಬರುವ ಚತುರ್ಥಿ(ಚೌತಿ) ತಿಥಿಯು ಅತ್ಯಂತ ವಿಶೇಷವಾದದ್ದು. ಈ ದಿನ ಗಣೇಶನನ್ನು ಇಟ್ಟು ಪೂಜಿಸುವ ರೂಢಿ ಕೆಲವೆಡೆ ನಡೆದು ಬಂದಿದೆ. ಮಾಘಮಾಸದ ಚತುರ್ಥಿಯು ಒಂದು ದಿನ ಮಾತ್ರ ಇರುತ್ತದೆ. ಗಣೇಶನ ಮಣ್ಣಿನ ಮೂರ್ತಿಯನ್ನು ಮಾಡಿ ಪೂಜಿಸಲಾಗುತ್ತದೆ.