ಸುಕ್ರಿ ಬೊಮ್ಮ ಗೌಡ ನಿಧನ: ಸಂಸದ ಕಾಗೇರಿ ಸಂತಾಪ
ಸುಕ್ರಿ ಬೊಮ್ಮ ಗೌಡ ನಿಧನ: ಸಂಸದ ಕಾಗೇರಿ ಸಂತಾಪ

ಶಿರಸಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕಿ ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಿಧನರಾದ ಸುದ್ದಿ ಕೇಳಿ ಅಘಾತವಾಯಿತು ಎಂದು ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.
ಸುಕ್ರಜ್ಜಿ ಎಂದೇ ಖ್ಯಾತರಾಗಿದ್ದ ಅವರು ಹಾಲಕ್ಕಿ ಜನಪದ ಹಾಡುಗಳನ್ನು ಹಾಡುವ ಮೂಲಕ ಚಿರಪರಿಚಿತರಾಗಿದ್ದರು ಮತ್ತು ಮಧ್ಯ ಮಾರಾಟ ಹಾವಳಿ ಹೆಚ್ಚಿದ್ದರಿಂದ ಅದನ್ನು ತಡೆಯಲು ಹಲವು ದಶಕಗಳ ಹಿಂದೆ ಜನಾಂದೋಲನ ಸಹ ನಡೆಸಿದ್ದರು. ಜಾನಪದಶ್ರೀ, ನಾಡೋಜ ಪ್ರಶಸ್ತಿಗೆ ಕೂಡ ಅವರು ಭಾಜನರಾಗಿದ್ದರು.
ಕೇಂದ್ರ ಸರಕಾರ ಅವರ ಜನಪದ ಪ್ರೇಮ ಮತ್ತು ಸಾಮಾಜಿಕ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರದಿಂದ ಕೊಡಮಾಡುವ “ಪದ್ಮಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಸುಕ್ರಿ ಗೌಡ ಅವರ ಅಗಲುವಿಕೆಯಿಂದ ಜನಪದ ಸಂಸ್ಕೃತಿ ಸಂರಕ್ಷಕಿಯಾಗಿದ್ದ, ಅದಮ್ಯ ಚೇತನವನ್ನು ನಾಡು ಕಳೆದುಕೊಂಡಂತಾಗಿದೆ.
ಸುಕ್ರಿ ಗೌಡರ ಅಗಲುವಿಕೆಯಿಂದ ಅವರ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಬಂಧುಗಳಿಗೆ ಹಾಗೂ ಸಮುದಾಯದವರಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಮತ್ತು ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.