Uncategorized

ಕಳಚಿದ ಜಾನಪದ ಲೋಕದ ಮೇರು ಕೊಂಡಿ: ಪದ್ಮಶ್ರೀ ಸುಕ್ರಿ ಗೌಡ ಇನ್ನಿಲ್ಲ

ಕಳಚಿದ ಜಾನಪದ ಲೋಕದ ಮೇರು ಕೊಂಡಿ: ಪದ್ಮಶ್ರೀ ಸುಕ್ರಿ ಗೌಡ ಇನ್ನಿಲ್ಲ

 

ಕಾರವಾರ: ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತ ಜಾನಪದ ಕಲಾವಿದೆ ಸುಕ್ರಿ ಬೊಮ್ಮ ಗೌಡ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನಜಾವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಂಕೋಲಾ ತಾಲ್ಲೂಕಿನ‌ ಬಡಗೇರಿಯ ಸುಕ್ರಿ ಬೊಮ್ಮ ಗೌಡ ಅವರಿಗೆ 88 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಹಿನ್ನಲೆಯಲ್ಲಿ ಹಲವು ಬಾರಿ‌ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು.

ಹಾಲಕ್ಕಿ ಸಮುದಾಯದ ಸುಕ್ರಿ ಬೊಮ್ಮ ಗೌಡ ಅವರಿಗೆ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿಗಳನ್ನು ಸಹ ಸುಕ್ರಜ್ಜಿ ಪಡೆದಿದ್ದರು. ಜಾನಪದ‌ ಹಾಡುಗಳ ಮೂಲಕ ಸಮುದಾಯದ ಮಹಿಳೆಯರನ್ನು ಪರಿಚಯಿಸುವ ಕಾರ್ಯವನ್ನು ಸುಕ್ರಜ್ಜಿ ನಿರ್ವಹಿಸಿದ್ದರು‌.

ಬಡಗೇರಿಯನ್ನು ಸಾರಾಯಿ‌ ಮುಕ್ತ ಗ್ರಾಮ ಮಾಡುವಲ್ಲಿ ಅವಿರತವಾಗಿ ಹೋರಾಡಿದ್ದ ಸುಕ್ರಜ್ಜಿ, ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲೂ ಸಾರಾಯಿ ತ್ಯಜಿಸುವಂತೆ ಕರೆ ನೀಡುತ್ತಿದ್ದರು. ಅಲ್ಲದೇ ಜಿಲ್ಲೆಯ ಅನೇಕ ಹೋರಾಟಗಳಲ್ಲಿ ಸುಕ್ರಜ್ಜಿ ಮುಂಚೂಣಿಯಲ್ಲಿ ಇದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ಅನಾರೋಗ್ಯದ ಹಿನ್ನಲೆ ಅಷ್ಟಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲವಾಗಿದ್ದು, ಇಂದು ಕೊನೆಯುಸಿರೆಳೆದಿರುವುದು ಜಿಲ್ಲೆಯ ಜಾನಪದ ಲೋಕದ ಮೇರು ಕೊಂಡಿ ಕಳಚಿದಂತಾಗಿದೆ. ಸುಕ್ರಿ ಬೊಮ್ಮ ಗೌಡ ನಿಧನಕ್ಕೆ ಜಿಲ್ಲೆಯ ಅನೇಕ ಗಣ್ಯರು, ಸಾಹಿತಿಗಳು, ಜಾನಪದ ಕಲಾವಿದರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!