ಭೂಸ್ವಾಧೀನ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಹೆಸರು ಸೇರಿಸಲು ಜಿಲ್ಲಾಧಿಕಾರಿಗೆ ವೃದ್ಧೆ ಮನವಿ
ಭೂಸ್ವಾಧೀನ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಹೆಸರು ಸೇರಿಸಲು ಜಿಲ್ಲಾಧಿಕಾರಿಗೆ ವೃದ್ಧೆ ಮನವಿ

ಕುಮಟಾ: ಅಂಕೋಲಾ ತಾಲೂಕಿನ ಅಲಗೇರಿಯ ವಿಮಾನ ನಿಲ್ದಾಣ ಯೋಜನೆಗೆ ಭೂ ಸ್ವಾಧೀನಗೊಂಡ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದ್ದರಿಂದ ಸಮಸ್ಯೆಗೊಳಗಾದ ವೃದ್ಧೆಯೋರ್ವಳು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಕಾರವಾರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವೃದ್ಧೆ ಸರಸ್ವತಿ ದೇವಪ್ಪ ಶೇಟ್ ಹಾಗೂ ಅವರ ಪುತ್ರ ನೀಲಕಂಠ ದೇವಪ್ಪ ಶೇಟ್ ಅವರು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರೀಯರನ್ನು ಭೇಟಿ ಮಾಡಿ ತಮಗಾದ ಸಮಸ್ಯೆಯನ್ನು ಹೇಳಿಕೊಂಡರು.
ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ 5.3 ಗುಂಟೆ ಜಾಗ ಹೊಂದಿದ್ದು, ಅಲ್ಲಿಯೇ ಚಿಕ್ಕ ಮನೆ ಕಟ್ಟಿಕೊಂಡು, ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವು. ನಾಲ್ಕೈದು ವರ್ಷಗಳ ಹಿಂದೆ ಅಲಗೇರಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ನಮ್ಮ ಮನೆಯ ಸುತ್ತಲಿನ ಎಲ್ಲ ಜಮೀನುಗಳು ಭೂ ಸ್ವಾಧೀನಗೊಂಡು ಆಯಾ ಜಾಗದ ಮಾಲಕರಿಗೆ ಪರಿಹಾರ ಕೂಡ ವಿತರಿಸಲಾಗಿದೆ. ಆದರೆ ಪರಿಹಾರ ಬಿಡುಗಡೆಯಾದ ಪಟ್ಟಿಯಲ್ಲಿ ನನ್ನ ಹೆಸರು ಮಾತ್ರ ಇಲ್ಲದ ಕಾರಣ ಪರಿಹಾರ ದೊರೆತಿಲ್ಲ. ಜಾಗದ ಪಹಣಿ ಪತ್ರಿಕೆ ನನ್ನ ಹೆಸರಿನಲ್ಲಿದ್ದರೂ ಪರಿಹಾರದ ಪಟ್ಟಿಯಲ್ಲಿ ನನ್ನ ಹೆಸರು ತಪ್ಪಿಹೋಗಲು ಕಾರಣ ಮಾತ್ರ ನನಗೆ ತಿಳಿದಿಲ್ಲ. ಈ ಸಂಬಂಧ ಹಲವು ಬಾರಿ ಕುಮಟಾದ ಸಹಾಯಕ ಆಯುಕ್ತರ ಕಚೇರಿಗೆ ಅಡ್ಡಾಡಿದರೂ ಪ್ರಯೋಜನವಾಗಿಲ್ಲ. ತಾವು ನನಗೆ ಪರಿಹಾರ ಕೊಡಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಬಡ ವೃದ್ಧೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರು 20 ದಿನಗಳೊಳಗಾಗಿ ಪರಿಹಾರದ ಪಟ್ಟಿಯಲ್ಲಿ ಸರಸ್ವತಿಯವರ ಹೆಸರು ಸೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ್ ಸುಧಾಕರ ನಾಯ್ಕ, ಹಿರಿಯ ನಾಗರಿಕರಾದ ಅನಿಲ್ ವರ್ಣೇಕರ, ಜೋನ್ ಬೇರೇಟ್ಟೊ ಹಾಗೂ ಮಾಹಿತಿ ಹಕ್ಕು ಜಿಲ್ಲಾ ಕಾರ್ಯದರ್ಶಿ ಬಾಬು ಅಂಬಿಗ ಇದ್ದರು.