ಗ್ರಾಮದ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ಕ್ರಮವಹಿಸಿ: ಗುಡ್ಡಳ್ಳಿ ಗ್ರಾಮಸ್ಥರಿಂದ ಶಾಸಕ ಸತೀಶ್ ಸೈಲ್‌ಗೆ ಮನವಿ
ಗ್ರಾಮದ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ಕ್ರಮವಹಿಸಿ: ಗುಡ್ಡಳ್ಳಿ ಗ್ರಾಮಸ್ಥರಿಂದ ಶಾಸಕ ಸತೀಶ್ ಸೈಲ್‌ಗೆ ಮನವಿ

ಕಾರವಾರ: ನಗರಸಭೆ ವ್ಯಾಪ್ತಿಯಲ್ಲಿರುವ ಕುಗ್ರಾಮ ಗುಡ್ಡಳ್ಳಿಗೆ ಮಂಜೂರಾಗಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸುತ್ತಿದ್ದು, ಮಳೆಗಾಲ ಸಮೀಪಿಸುತ್ತಿರುವ ಕಾರಣ ಕೂಡಲೇ ರಸ್ತೆಯನ್ನು ಡಾಂಬರೀಕರಣಗೊಳಿಸಿ ಕಾಮಗಾರಿಗೆ ವಿನಿಯೋಗಿಸಿರುವ ಹಣ ವ್ಯರ್ಥವಾಗದಂತೆ ಕ್ರಮವಹಿಸುವಂತೆ ಊರಿನ ಗ್ರಾಮಸ್ಥರು ಶಾಸಕ ಸತೀಶ್ ಸೈಲ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕಾರವಾರ ನಗರಸಭೆಯ 31ನೇ ವಾರ್ಡ್ ಆಗಿರುವ ಗುಡ್ಡಳ್ಳಿಗೆ ಈವರೆಗೂ ರಸ್ತೆ ಸಂಪರ್ಕ ಇಲ್ಲ. ಬ್ರಿಟಿಷ್ ಕಾಲದಿಂದಲೂ ಇಲ್ಲಿ ವಾಸ ಮಾಡಿಕೊಂಡು ಬಂದಿರುವ ಗ್ರಾಮಸ್ಥರು ಇದೀಗ ನಿತ್ಯ ಸಂಚಾರಕ್ಕೆ ಪರದಾಡಬೇಕಾಗಿದೆ. ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳಿದ್ದು ಉದ್ಯೋಗ, ಕೂಲಿ ಸೇರಿದಂತೆ ಇತರೆ ಕೆಲಸಗಳಿಗೆ 8 ಕಿ.ಮೀ ನಡೆದುಕೊಂಡು ಸಾಗಬೇಕಾಗಿದೆ. ಗ್ರಾಮದಲ್ಲಿ ಯಾರೊಬ್ಬರು ಅನಾರೋಗ್ಯಕ್ಕೊಳಗಾದರೂ ಕೂಡ ಕಂಬಳಿ ಜೋಳಿಗೆ ಮಾಡಿ ಆಸ್ಪತ್ರೆಗೆ ಸಾಗಿಸಬೇಕಾಗಿದೆ. ಆದ್ದರಿಂದ ನಮಗೆ ಅಗತ್ಯವಿರುವ ಕಚ್ಚಾ ರಸ್ತೆಯನ್ನು ಡಾಂಬರೀಕರಣಗೊಳಿಸುವಂತೆ ಕಳೆದ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಗ್ರಾಮಕ್ಕೆ 1 ಕಿ.ಮೀ ರಸ್ತೆ ಮಂಜೂರಿ ಆಗಿತ್ತಾದರೂ ಕಳೆದೊಂದು ವರ್ಷದಿಂದ ಕುಂಟುತ್ತಿದೆ. ಇದೀಗ ಕಚ್ಚಾರಸ್ತೆಗೆ ಮಣ್ಣು, ಜೆಲ್ಲಿ ಹಾಗೂ ಜೆಲ್ಲಿಯ ಪೌಡರ್ ಹಾಕಿದ್ದು, ನೀರು ಹಾಕದೇ ಹಾಗೆಯೇ ರೋಲರ್ ಉರುಳಿಸಲಾಗುತ್ತಿದೆ. ಆದರೆ ಇದು ಘಟ್ಟಪ್ರದೇಶವಾದ ನಮ್ಮ ರಸ್ತೆಯಲ್ಲಿ ಗಟ್ಟಿಯಾಗುವ ಅನುಮಾನ ಇದೆ. ಅಲ್ಲದೇ ರಸ್ತೆಯ ಎರಡು ಬದಿ ಗಟಾರ ನಿರ್ಮಾಣ ಮಾಡಬೇಕಿದ್ದರೂ ಈವರೆಗೂ ಮಾಡಿಲ್ಲ. ಇದರಿಂದ ಮಳೆಗಾಲದ ನೀರು ರಸ್ತೆ ಮೇಲೆ ಹಾದುಹೋಗಿ ರಸ್ತೆಗೆ ಹಾಕಿದ ಹಣ ಕೂಡ ವ್ಯರ್ಥವಾಗುವ ಆತಂಕ ಇದೀಗ ಗ್ರಾಮಸ್ಥರನ್ನು ಕಾಡುತ್ತಿದೆ.
ಒಂದೊಮ್ಮೆ ಹೀಗೇ ಬಿಟ್ಟಲ್ಲಿ ಇದೇ ರಸ್ತೆಯಲ್ಲಿ ಮಕ್ಕಳು, ವೃದ್ದರು ಸೇರಿದಂತೆ ಗ್ರಾಮಸ್ಥರು ಓಡಾಟ ನಡೆಸುವ ಕಾರಣ ಬೀಳಬಹುದಾದ ಸಾಧ್ಯತೆಗಳು ಹೆಚ್ಚಾಗಿದೆ. ಆದ ಕಾರಣ ಕೂಡಲೇ ರಸ್ತೆಯನ್ನು ಡಾಂಬರೀಕರಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಕೃಷ್ಣ ಗೌಡ, ಪ್ರಭಾಕರ್ ಗೌಡ, ವಿಶ್ರಾಮ ಗೌಡ, ಶಿವಾನಂದ ಗೌಡ, ದುರ್ಗಾ ಗೌಡ, ದಿನೇಶ ಗೌಡ, ಮೋಹನ್ ಗೌಡ, ದಾಸ ಗೌಡ ಇನ್ನಿತರರು ಇದ್ದರು.