
ಕಾರವಾರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ರಾತ್ರಿ ಕರ್ತವ್ಯದಲ್ಲಿದ್ದ ಡಿ ದರ್ಜೆ ನೌಕರರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ 70ಕ್ಕೂ ಹೆಚ್ಚು ನೌಕರರು ಕರ್ತವ್ಯಕ್ಕೆ ಹಾಜರಾಗದೇ ದಿಢೀರ್ ಮುಷ್ಕರ ನಡೆಸಿದ ಘಟನೆ ನಡೆದಿದೆ.
ಬುಧವಾರ ರಾತ್ರಿ ಇಲ್ಲಿನ ತುರ್ತು ಚಿಕಿತ್ಸಾ ಘಟಕಕ್ಕೆ ರೋಗಿಯೋರ್ವರನ್ನು ಚಿಕಿತ್ಸೆಗೆ ಕರೆತರಲಾಗಿತ್ತು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಯ ಕಡೆಯವರಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ರೋಗಿಯೊಂದಿಗೆ ಬಂದ ಕೆಲವರು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಡಿ ದರ್ಜೆ ನೌಕರರು ಸೇರಿದಂತೆ ಕೆಲವರಿಗೆ ಗಂಭೀರ ಪೆಟ್ಟಾಗುವಂತೆ ಹಲ್ಲೆ ನಡೆಸಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.
ಹಲ್ಲೆಯ ಹಿನ್ನಲೆ ಗುರುವಾರ ಬೆಳಗ್ಗೆ ಜಿಲ್ಲಾಸ್ಪತ್ರೆಯ ಎದುರು ಜಮಾವಣೆಗೊಂಡ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಮುಷ್ಕರ ಕೈಗೊಂಡರು. ಕೆಲಹೊತ್ತಿನ ಬಳಿಕ ಆಗಮಿಸಿದ ಕ್ರಿಮ್ಸ್ ನಿರ್ದೇಶಕಿ ಪೂರ್ಣಿಮಾ ಅವರು ಸ್ಥಳಕ್ಕೆ ಆಗಮಿಸಿ ನೌಕರರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು.
ಹಲ್ಲೆ ನಡೆಸಿದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಆಸ್ಪತ್ರೆಯ ಕಡೆಯಿಂದಲೇ ಪೊಲೀಸ್ ದೂರು ನೀಡಲಿದ್ದೇವೆ. ಹಲ್ಲೆ ನಡೆಸಿದವರನ್ನು 24 ಗಂಟೆಯಲ್ಲಿಯೇ ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದರು. ರೋಗಿಗಳ ಹಿತಕ್ಕಾಗಿ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದರು.