ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ ನಡುವೆಯೂ ಗ್ರಾಮಸ್ಥರ ಪ್ರತಿಭಟನೆ; ಬಂದರು ಕಾಮಗಾರಿಗೆ ವಿರೋಧ
ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ ನಡುವೆಯೂ ಗ್ರಾಮಸ್ಥರ ಪ್ರತಿಭಟನೆ; ಬಂದರು ಕಾಮಗಾರಿಗೆ ವಿರೋಧ

ಅಂಕೋಲಾ: ಬಂದರು ಕಾಮಗಾರಿಗಾಗಿ ಭೂವಿಜ್ಞಾನ ಸಮೀಕ್ಷೆ ನಡೆಸುವ ಉದ್ದೇಶದಿಂದ ನಿಷೇಧಾಜ್ಞೆ ಹೊರಡಿಸಿ ಸರ್ವೆಗೆ ಮುಂದಾದ ಕ್ರಮವನ್ನು ವಿರೋಧಿಸಿ ಕೇಣಿ ಗ್ರಾಮದ ನೂರಾರು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆ ಕೇಣಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಆದೇಶಿಸಿದ್ದರು. ಈ ಹಿಂದಿನಿಂದಲೂ ಕೇಣಿ ಗ್ರೀನ್ ಫೀಲ್ಡ್ ಬಂದರು ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳೀಯರು ನಿಷೇಧಾಜ್ಞೆ ಇದ್ದರೂ ಸಹ ಎಲ್ಲರೂ ಬಂದರು ಕಾಮಗಾರಿ ಪ್ರದೇಶದಲ್ಲಿ ಜಮಾವಣೆಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಂದರು ಕಾಮಗಾರಿ ನಡೆಸದಂತೆ ಆಗ್ರಹಿಸಿ ಘೋಷಣೆ ಕೂಗುತ್ತಿದ್ದು, ಸಮೀಕ್ಷೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದ ಹಿನ್ನಲೆ ಕೇಣಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕೇಣಿ ಗ್ರಾಮದಾದ್ಯಂತ ಪೊಲೀಸ್ ಸರ್ಪಗಾವಲು ವಹಿಸಿದ್ದು, ಗ್ರಾಮಸ್ಥರಿಂದ ಸರ್ವೆ ಕಾರ್ಯಕ್ಕೆ ತೊಂದರೆಯಾಗದಂತೆ ಕ್ರಮ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತಾದರೂ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಕೇಣಿ ಗ್ರಾಮದಲ್ಲಿ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ನಿರ್ಮಾಣಕ್ಕೆ ಜೆಎಸ್‌ಡಬ್ಲೂ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ಸುಮಾರು 4119 ಕೋಟಿ ವೆಚ್ಚದಲ್ಲಿ ಕೇಣಿ ಸಮುದ್ರ ಪ್ರದೇಶದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಯೋಜನೆ ಇದಾಗಿದೆ. ಆದರೆ ಬಂದರು ನಿರ್ಮಾಣವಾದಲ್ಲಿ ಗ್ರಾಮದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅಡ್ಡಿಯಾಗಲಿದೆ ಹಾಗೂ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲಾಗುತ್ತದೆ ಎನ್ನುವ ಆತಂಕದಲ್ಲಿ ಸ್ಥಳೀಯ ನಿವಾಸಿಗಳು ಬಂದರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.