ನಾನು ಎಂದಿಗೂ ಮೀನುಗಾರರ ಪರವಾಗಿದ್ದೇನೆ – ಶಾಸಕ ಸೈಲ್
ನಾನು ಎಂದಿಗೂ ಮೀನುಗಾರರ ಪರವಾಗಿದ್ದೇನೆ - ಶಾಸಕ ಸೈಲ್

ಅಂಕೋಲಾ: ತಾಲೂಕಿನ ಕೇಣಿ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ಸರ್ವೇ ಕಾರ್ಯ ವಿರೋಧಿಸಿ ಭಾವಿಕೇರಿ ಗ್ರಾಮ ಪಂಚಾಯತ್ ನ ಸುತ್ತಮುತ್ತಲಿನ ಸಮಸ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಶಾಸಕ ಸತೀಶ ಸೈಲ ಮಾತನಾಡಿ ನಾನು ಮೀನುಗಾರರ ಪರವಾಗಿದ್ದೇನೆ. ಈ ಯೋಜನೆ ಯಾವ ಅವಧಿಯಲ್ಲಿ ಆಗಿದ್ದು ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಕೇವಲ ಕೇಂದ್ರ ಸರ್ಕಾರದ ಜವಾಬ್ದಾರಿ ಮಾತ್ರ ಇಂತಹ ಯೋಜನೆಗಳಲ್ಲಿ ಇರುವುದಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಸರ್ಕಾರವು ಸಹಭಾಗಿತ್ವ ವಹಿಸಬೇಕಾಗುತ್ತದೆ. ಸಾಧಕ ಬಾದಕಗಳನ್ನು ಮೊದಲು ವಿಚಾರಿಸೋಣ. ಈಗ ಕರಾವಳಿಯ ತೀರಗುಂಟ ಹಲವು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಯೋಗ್ಯ ಸ್ಥಳ ಯಾವುದು ಎನ್ನುವುದರ ಕುರಿತು ಸರ್ವೆ ಕಾರ್ಯವನ್ನು ಮಾಡುತ್ತಿದ್ದಾರೆ. ಈಗಾಗಲೇ ಕೆಲವು ಸ್ಥಳೀಯರು ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ನಾವೆಲ್ಲರೂ ಕುಳಿತು ಮಾತುಕತೆ ನಡೆಸೋಣ. ಇದರ ಸಾಧಕ ಬಾದಕಗಳನ್ನು ಅರ್ಥೈಸಿಕೊಳ್ಳೋಣ. ಮಹಿಳೆಯರು ಮತ್ತು ಪುರುಷರು ಪ್ರಮುಖರು ಕೆಲವರು ಬಂದು ತಹಶೀಲ್ದಾರ್ ಕಾರ್ಯದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳೋಣ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಮಾತನಾಡಿ ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿದ ಮೇಲೆ ಅಧಿಕಾರಗಳಾಗಿ ನಮ್ಮ ಕರ್ತವ್ಯ ನಾವು ನಿರ್ವಹಿಸಬೇಕಾಗುತ್ತದೆ. ಇಲ್ಲಿಯ ಸಾರ್ವಜನಿಕರು ಸರ್ವೆ ಕಾರ್ಯಕ್ಕೆ ಪ್ರತಿಭಟನೆ ಒಡ್ಡುತ್ತಾರೆ ಎನ್ನುವ ವಿಚಾರ ತಿಳಿದು ಬಂದಿತ್ತು. ಆಕಾರಣಕ್ಕಾಗಿ 144 ಜಾರಿಗೊಳಿಸಿದ್ದೇನೆ. ಇಲ್ಲಿ ನಿಮಗೆ ತೊಂದರೆ ನೀಡುವ ವಿಚಾರವಿಲ್ಲ. ನೀವು ನನಗೆ ಮನವಿ ನೀಡಿದ್ದು ನಿಜ. ಆದರೆ ಯಾವುದೇ ಸಭೆಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಸಿ ಎಂದು ನೀವು ತಿಳಿಸಿಲ್ಲ. ಸಾರ್ವಜನಿಕರ ಜೊತೆಯಲ್ಲಿ ಸಭೆ ನಡೆಸುವುದು ಯೋಜನೆ ಜಾರಿಗೊಳಿಸಿದ ಮೇಲೆ. ಈಗ ಪ್ರಾಥಮಿಕ ಹಂತದ ಸರ್ವೆ ಕಾರ್ಯ ನಡೆಯುತ್ತಿದೆ. ನಾವು ಸಹ ಜನರ ಪರವಾಗಿದ್ದೇವೆ.
ಬಂದರು ಇಲಾಖೆಯ ಅಧಿಕಾರಿ ಮಾತನಾಡಿ
ಕೇಂದ್ರ ಸರ್ಕಾರದ ಸಾಗರ ಮಾಲಾ ಯೋಜನೆಯಡಿ ದೇಶದ ಉದ್ದಗಲದಲ್ಲಿ ಸಮುದ್ರ ತೀರಗಳಲ್ಲಿರುವ ಇಂತಹ ಕಡಲ ತೀರಗಳನ್ನು ಗುರುತಿಸಿ ಯೋಗ್ಯವೆನಿಸಿದ ಕಡಲತೀರದಲ್ಲಿ ಬಂದರನ್ನು ನಿರ್ಮಾಣ ಮಾಡುವ ಯೋಜನೆ 2017-18 ರಲ್ಲಿ ಪ್ರಾರಂಭವಾಗಿತ್ತು. ಈಗ ಪ್ರತಿಯೊಂದು ಕಡೆಗಳಲ್ಲಿ ಪ್ರಾಥಮಿಕ ಹಂತದ ಸ್ಥಳವನ್ನು ಪರೀಕ್ಷಿಸುವ ಸರ್ವೇ ನಡೆಯುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ಬೇಕರ್ ಮಾತನಾಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಈಗ ಸ್ವಲ್ಪ ಪ್ರಮಾಣದಲ್ಲಿ ನಾವು ಮೀನುಗಾರರು ಸೇರಿದ್ದೇವೆ. ಮುಂದಿನ ದಿನಗಳಲ್ಲಿ ಈ ಬಂದರು ನಿರ್ಮಾಣವಾಗುತ್ತದೆ ಎಂದಾದಲ್ಲಿ ಮೀನುಗಾರ ಸಮುದಾಯದವರು ಜಿಲ್ಲೆಯ ಮೂಲೆ ಮೂಲೆಯಿಂದ ಬಂದು ಜೊತೆಯಾಗಿ ಪ್ರತಿಭಟನೆ ನಡೆಸುತ್ತೇವೆ. ಇದಕ್ಕೆ ಆಗುವ ಹೊಣೆಯನ್ನು ಸಂಪೂರ್ಣವಾಗಿ ಜಿಲ್ಲಾಡಳಿತ ಹೊರಬೇಕಾಗುತ್ತದೆ. ಈ ಬಂದರು ಇಲ್ಲಿ ಆಗದಂತೆ ಕ್ರಮ ತೆಗೆದುಕೊಳ್ಳಬೇಕಾದದ್ದು ನಮ್ಮೆಲ್ಲರ ಆಧ್ಯ ಕರ್ತವ್ಯ ಕೂಡ ಎಂದರು
ಪ್ರಮುಖರಾದ ಶ್ರೀಕಾಂತ್ ದುರ್ಗೇಕರ್, ಚಂದ್ರಕಾಂತ ಹರಿಕಾಂತ್, ಗಣಪತಿ ಮಾಂಗ್ರೆ,ಸರಿತಾ ಬಲೆಗಾರ್ ಸೇರಿದಂತೆ ಇತರ ಮೀನುಗಾರ ಪ್ರಮುಖರು ಮಾತನಾಡಿದರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪ್ರಮುಖರು ಉಪಸ್ಥಿತರಿದ್ದರು.