ಗೋಕರ್ಣದಲ್ಲಿ ಕಳೆಗಟ್ಟಿದ ಮಹಾಶಿವರಾತ್ರಿ ಸಂಭ್ರಮ: ಆತ್ಮಲಿಂಗ ಸ್ಪರ್ಶಕ್ಕೆ ಸರದಿ ಸಾಲು
ಗೋಕರ್ಣದಲ್ಲಿ ಕಳೆಗಟ್ಟಿದ ಮಹಾಶಿವರಾತ್ರಿ ಸಂಭ್ರಮ: ಆತ್ಮಲಿಂಗ ಸ್ಪರ್ಶಕ್ಕೆ ಸರದಿ ಸಾಲು

ಕಾರವಾರ: ಮಹಾಶಿವರಾತ್ರಿ ನಿಮಿತ್ತ ಪುರಾಣ ಪ್ರಸಿದ್ಧ ಗೋಕರ್ಣಕ್ಕೆ ಭಕ್ತರ ದಂಡೆ ಹರಿದುಬಂದಿದ್ದು, ಪರಶಿವನ ಆತ್ಮಲಿಂಗ ಸ್ಪರ್ಶಿಸಿ ಪೂಜೆ ಮಾಡಲು ಕಿ.ಮೀ ಗಟ್ಟಲೇ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ.
ಹೌದು ಪುರಾಣ ಪ್ರಸಿದ್ಧ ಪರಶಿವ ಆತ್ಮಲಿಂಗವಿರುವ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಗೋಕರ್ಣದಲ್ಲಿ ಮಹಾಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ.
ಶಿವನ ಭಕ್ತರು ಮುಂಜಾನೆಯಿಂದಲೇ ಶಿವಾರಾಧನೆಯಲ್ಲಿ ತೊಡಗಿಕೊಂಡಿದ್ದು ಗೋಕರ್ಣದಲ್ಲಿ ಮುಂಜಾನೇ ನಾಲ್ಕು ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಕಾದಿದ್ದ ಭಕ್ತರಿಗೆ ಬೆಳಿಗ್ಗೆ 5 ಗಂಟೆಯಿಂದ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಶಿವಭಕ್ತರು ಗರ್ಭಗುಡಿ ಪ್ರವೇಶಿಸಿ ಶಿವನ ಆತ್ಮಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ, ಬಿಲ್ವಪತ್ರೆ ಸೇರಿದಂತೆ ಬಗೆ ಬಗೆಯ ಹೂ ಹಾಕಿ ಪೂಜೆ ಸಲ್ಲಿಸಿದರು. ಬಳಿಕ ಆತ್ಮಲಿಂಗ ಸ್ಪರ್ಶಿಸಿ ಧನ್ಯತೆ ಪಡೆದರು.
ಇನ್ನು ಪೂಜೆಗೆ ಕೆಲವರು ಮನೆಯಿಂದಲೇ ಸ್ನಾನಮಾಡಿ ಬಂದರೇ ಇನ್ನು ಕೆಲವರೂ ಕಡಲತೀರದಲ್ಲಿ ಸ್ನಾನ ಮಾಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಇದಲ್ಲದೇ ಅದೇಷ್ಟೊ ಭಕ್ತರು ಮಕ್ಕಳು ಮರಳಿನ ಮೂಲಕ ಶಿವಲಿಂಗ ನಿರ್ಮಿಸಿ ಪೂಜೆ ಪುನಸ್ಕಾರ ನಡೆಸಿದರು.
ಮುಂಜಾನೆಯಿಂದಲೇ ಕಡಲತೀರದಲ್ಲಿ ಜನಜಂಗುಳಿ ಕಂಡುಬಂತು. ಎಲ್ಲೆಡೆ ಪೊಲೀಸ್ ಭದ್ರತೆ ಕೂಡ ಕೈಗೊಳ್ಳಲಾಗಿತ್ತು.