ಕಾರವಾರದಲ್ಲಿ ಮಹಾಶಿವರಾತ್ರಿ ಸಂಭ್ರಮ; ಶೆಜ್ಜೇಶ್ವರನಿಗೆ ಪೂಜೆ ಸಲ್ಲಿಸಿ ಪುನೀತರಾದ ಭಕ್ತರು
ಕಾರವಾರದಲ್ಲಿ ಮಹಾಶಿವರಾತ್ರಿ ಸಂಭ್ರಮ; ಶೆಜ್ಜೇಶ್ವರನಿಗೆ ಪೂಜೆ ಸಲ್ಲಿಸಿ ಪುನೀತರಾದ ಭಕ್ತರು

ಕಾರವಾರ: ಮಹಾಶಿವರಾತ್ರಿ ಹಿನ್ನಲೆ ಕಾರವಾರ ತಾಲೂಕಿನಾದ್ಯಂತ ಶಿವನ ದೇವಸ್ಥಾನಗಳಲ್ಲಿ ಬುಧವಾರ ಮಹಾ ಶಿವರಾತ್ರಿ ಆಚರಣೆ ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ನಡೆಯಿತು.
ನಗರದ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನ, ಬಾಡದ ಮಹಾದೇವ ದೇವಸ್ಥಾನ, ಕಾಲರುದ್ರೇಶ್ವರ ದೇವಸ್ಥಾನ ಹಾಗೂ ಕಡವಾಡ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ಆಗಮಿಸಿದ್ದರು.
ಶಿವನ ಆತ್ಮಲಿಂಗದ ಪಂಚ ಕ್ಷೇತ್ರಗಳಲ್ಲಿ ಒಂದಾದ ಇಲ್ಲಿನ ಶೆಜ್ಜೇಶ್ವರ ದೇವಸ್ಥಾನದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಭಕ್ತರು ಸೇರಿದ್ದರು. ಈ ಬಾರಿ ದೇವಸ್ಥಾನದ ಪ್ರವೇಶ ದ್ವಾರವನ್ನು ಕೈಲಾಸ ಪರ್ವತದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಜೊತೆಗೆ ಜಿಲ್ಲೆಯಲ್ಲಿರುವ ಶಿವನ ಆತ್ಮಲಿಂಗದ ಪಂಚ ಕ್ಷೇತ್ರಗಳ ಮತ್ತು ರಾವಣನು ಶಿವನ ಆತ್ಮಲಿಂಗವನ್ನು ಎತ್ತುತ್ತಿರುವ ಸ್ತಬ್ಧಚಿತ್ರಗಳನ್ನು ನಿರ್ಮಿಸಿ ಪ್ರದರ್ಶನಕ್ಕೆ ಇರಿಸಿದ್ದು, ಭಕ್ತರ ಗಮನ ಸೆಳೆಯಿತು.
ಮುಂಜಾನೆಯಿಂದ ಸಂಜೆಯವರೆಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳೊಂದಿಗೆ ಅಭಿಷೇಕಗಳು ನಡೆದವು. ನೂರಾರು ಭಕ್ತರು ಸಾಲುಸಾಲಾಗಿ ಆಗಮಿಸಿ ದೇವರ ದರ್ಶನ ಪಡೆದರು. ಕಾರವಾರ ಸೇರಿದಂತೆ ನೆರೆಯ ಗೋವಾ ರಾಜ್ಯದಿಂದಲೂ ಭಕ್ತರು ಆಗಮಿಸಿ ಪೂಜೆ ಸಂಕಲ್ಪಗಳನ್ನು ಕೈಗೊಂಡರು.