ಪ್ರವಾಸಿಗರ ಇನ್ನೋವಾ ಕಾರು ಮರಕ್ಕೆ ಡಿಕ್ಕಿ: 8 ಮಂದಿಗೆ ಗಾಯ
ಪ್ರವಾಸಿಗರ ಇನ್ನೋವಾ ಕಾರು ಮರಕ್ಕೆ ಡಿಕ್ಕಿ: 8 ಮಂದಿಗೆ ಗಾಯ

ದಾಂಡೇಲಿ: ಹುಬ್ಬಳ್ಳಿಯಿಂದ ಪ್ರವಾಸಕ್ಕೆಂದು ದಾಂಡೇಲಿಗೆ ಬರುತ್ತಿದ್ದ ಪ್ರವಾಸಿಗರ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ 8 ಮಂದಿ ಗಾಯಗೊಂಡು, ಓರ್ವನಿಗೆ ಗಂಭೀರ ಗಾಯವಾದ ಘಟನೆ ತಾಲ್ಲೂಕಿನ ಹಳಿಯಾಳ-ದಾಂಡೇಲಿ ರಸ್ತೆಯ ತಾಟಗೇರಾ ಕ್ರಾಸ್ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ದಾಂಡೇಲಿಗೆ ಕೆಎ:37, ಎಂ:7877 ಸಂಖ್ಯೆಯ ಇನೋವಾ ಕಾರಿನಲ್ಲಿ ಪ್ರವಾಸಕ್ಕೆಂದು ಬರುತ್ತಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ತಾಟಗೇರಾ ಕ್ರಾಸ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಹೆದ್ದಾರಿ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಗಂಭೀರ ಗಾಯಗೊಂಡಿದ್ದ ಹುಬ್ಬಳ್ಳಿಯ ನಿವಾಸಿ ಅನೂಪ್ ಅವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.
ಉಳಿದಂತೆ ಹುಬ್ಬಳ್ಳಿ ಮೂಲದ ಮಹಮ್ಮದ್ ಪುರ್ಕಾನ್, ಮಲಿಕ್ ಇರ್ಫಾನ್ ನದಾಫ್ ಮತ್ತು ಅಲಿಸಾಬ್ ಇರ್ಫಾನ್ ನದಾಫ್ ಅವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಧಾರವಾಡ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಕೌಶಿಕ್ ಮತ್ತು ನಂದನ್ ಹಾಗೂ ಇನ್ನಿತರರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಮರಕ್ಕೆ ಡಿಕ್ಕಿಯಾದ ಪರಿಣಾಮವಾಗಿ ಇನೋವಾ ಕಾರು ಪಲ್ಟಿಯಾಗಿ ಜಖಂಗೊಂಡಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐ ಜಗದೀಶ್, ಎಎಸ್ಐ ವೆಂಕಟೇಶ ತೆಗ್ಗಿನ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.