ಶಿರೂರು ದುರಂತದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಏ.2 ರಿಂದ ಆಮರಣಾಂತ ಉಪವಾಸ: ಡಾ. ಪ್ರಣವಾನಂದ ಸ್ವಾಮೀಜಿ
ಶಿರೂರು ದುರಂತದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಏ.2 ರಿಂದ ಆಮರಣಾಂತ ಉಪವಾಸ: ಡಾ. ಪ್ರಣವಾನಂದ ಸ್ವಾಮೀಜಿ

ಕಾರವಾರ: ಶಿರೂರು ದುರಂತದಲ್ಲಿ 11 ಮಂದಿ ಸಾವನ್ನಪ್ಪಿದರೂ, ಪೊಲೀಸರು ಐಆರ್‌ಬಿ ಕಂಪೆನಿಯವರ ವಿರುದ್ಧ ಕಾಟಾಚಾರಕ್ಕೆ ಪ್ರಕರಣ ದಾಖಲಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ ಹೋರಾಟ ನಡೆಸಿದ ಬಳಿಕ ಈಗ ದೂರು ಕೊಲೆ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪಿಠಾದೀಪತಿ ಡಾ. ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 8 ತಿಂಗಳ ಬಳಿಕ ನಮ್ಮ ಅರ್ಜಿ ತಿರಸ್ಕಾರಕ್ಕೆ ಪೊಲೀಸರು ಕೋರಿದ್ದು, ಮೊದಲೇ ಪ್ರಕರಣ ದಾಖಲಿಸಿದ್ದು, ಮತ್ತೆ ತನಿಖೆ ಅವಶ್ಯವಿಲ್ಲ ಎಂದಿದ್ದರು. ಆದರೆ ಇದೀಗ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದ್ದು, ಅಂಕೋಲಾ ಎಸ್‌ಹೆಚ್ಓ ಹಾಕಿದ್ದ ಅರ್ಜಿಯನ್ನು ತಿರಸ್ಕರಿಸಿ, ನಾವು ನೀಡಿದ್ದ ಅರ್ಜಿ ವಿಚಾರಣೆಗೆ ತೆಗೆದುಕೊಂಡು ನ್ಯಾಯಾಲಯ ಕೊಲೆ ಪ್ರಕರಣ ದಾಖಲಿಸಲು ಪೊಲಿಸ್ ಇಲಾಖೆಗೆ ಸೂಚನೆ ನೀಡಿತ್ತು. ಹೀಗಾಗಿ ಪೊಲೀಸರು ಸೆಕ್ಷನ್ 101 ಬಿಎನ್‌ಎಸ್ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಆರೋಪಿಗನ್ನು ಬಂಧಿಸಿಲ್ಲ. ಈ ತಿಂಗಳ ಅಂತ್ಯದೊಳಗೆ ಬಂಧಿಸದೇ ಇದ್ದರೆ ಏಪ್ರಿಲ್ 2 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಟೊಂಕಾ ಬಂದರು ಪ್ರತಿಭಟನೆ ವೇಳೆ ಕಂಪೆನಿಯವರು ದೂರು ನೀಡಿದ ಒಂದು ಗಂಟೆಯೊಳಗೆ ಪ್ರತಿಭಟನಾಕಾರರನ್ನು ಬಂಧನ ಮಾಡಿದ್ದರು, ಆದರೆ 11 ಮಂದಿ ಸಾವಿಗೆ ಕಾರಣರಾದವರ ವಿರುದ್ದ ಯಾವುದೇ ಕ್ರಮವಾಗಿಲ್ಲ. ಅಂಕೋಲಾ ಪೊಲೀಸರು ಎಫ್‌ಐಆರ್ ದಾಖಲಿಸಿರುವುದರಲ್ಲಿ ನನ್ನ ಜಾತಿಯನ್ನು ಬುಡಗ ಜಂಗಮ ಎಂದು ಹಾಕಿದ್ದು, ಈ ಮೂಲಕ ಸಮಾಜದಲ್ಲಿ ಗೊಂದಲ ಎಬ್ಬಿಸಲು ಷಡ್ಯಂತ್ರ ಮಾಡಿದ್ದಾರೆ. ಜಿಲ್ಲೆಯ ಅಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಕಂಪೆನಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶ್ರೀಧರ ನಾಯ್ಕ, ಶಿರೂರುನ ಮನೀಶಾ ನಾಯ್ಕ, ಶ್ರೀನಿವಾಸ್ ನಾಯ್ಕ, ವಿನೋದ ನಾಯ್ಕ, ಪ್ರಶಾಂತ ಮತ್ತಿತರರು ಇದ್ದರು.