ಉತ್ತರಕನ್ನಡ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯಾಗಲಿ: ಸತೀಶ್ ಸೈಲ್
ಉತ್ತರಕನ್ನಡ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯಾಗಲಿ: ಸತೀಶ್ ಸೈಲ್

ಕಾರವಾರ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆಯನ್ನು ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು ಮುಂದಿನ ದಿನದಲ್ಲಿ ಈ ಕಾರ್ಯಕ್ಕೆ ಯಶಸ್ಸು ಖಚಿತವಾಗಿ ದೊರೆಯಲಿದೆ ಎಂದು ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಕೆ.ಸೈಲ್ ಹೇಳಿದರು.
ಅವರು ಭಾನುವಾರ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ 2025ರ ಮ್ಯಾರಾಥಾನ್ 5K ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಉತ್ಸುಕರಾಗಿ 1000 ಅಧಿಕ ಜನರು ನೋಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿರುವುದನ್ನು ಕಂಡು ಹರ್ಷ ವ್ಯಕ್ತಪಡಿಸಿ ಎಲ್ಲರಿಗೂ ಶುಭ ಕೋರಿದರು.
ಜಿಲ್ಲಾಧಿಕಾರಿ ಕೆ.ಲಕ್ಮೀಪ್ರಿಯಾ ಮಾತನಾಡಿ, ಪ್ರತಿಯೊಬ್ಬರು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ದೈಹಿಕವಾಗಿ ಸದೃಢರಾಗಲು ಪ್ರತಿದಿನ ಸ್ವಲ್ಪ ಸಮಯವನ್ನು ಮೀಸಲಿಡಿ. ಡ್ರಗ್ಸ್ ಅಥವಾ ಮಾದಕ ವಸ್ತುಗಳನ್ನು ನಿಯಂತ್ರಣ ಮಾಡಲು ಜಿಲ್ಲೆಯಲ್ಲಿ ಎನ್ಕ್ವಾಡ್ ( ನಾರ್ಕಟಿಕ್ ಕ್ರೈಂ ಕೋ-ಆರ್ಡಿನೇಷನ್ ಕಮಿಟಿ) ಇದೆ. ಈ ಕಮಿಟಿಯು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಜಾಗೃತರಾಗಿದ್ದು, ಮಾದಕ ವಸ್ತುಗಳ ಸೇವನೆ ಮಾಡದೇ ಉತ್ತಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ.ಎಂ ಮಾತನಾಡಿ ಮುಖ್ಯ ಮಂತ್ರಿಗಳು ಇಂದು ವಿಧಾನಸೌಧದ ಬಳಿ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಡ್ರಗ್ಸ್ ಫ್ರೀ ಹಾಗೂ ಸೈಬರ್ ಕ್ರೈಂ ಫ್ರೀ ಮುಕ್ತ ಕರ್ನಾಟಕ್ಕಾಗಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2 ಆವೃತ್ತಿಯ ಮ್ಯಾರಥಾನ್ ನ್ನು ಇಡಿ ರಾಜ್ಯದಲ್ಲೇ ಆಯೋಜನೆ ಮಾಡಲಾಗಿದೆ ಎಂದರು.
ಯಾರೂ ಕೂಡ ಡ್ರಗ್ಸ್ ಗೆ ತುತ್ತಾಗಬಾರದು ಪೊಲೀಸ್ ಇಲಾಖೆಯಿಂದ ಮಾತ್ರ ಮಾದಕ ವಸ್ತುಗಳ ನಿಯಂತ್ರಣ ಮಾಡಲು ಸಾಧ್ಯವಿಲ್ಲ, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಯಾರಾದರೂ ಡ್ರಗ್ಸ್ ಸೇವನೆ ಅಥವಾ ಮಾರಾಟ ಮಾಡುವುದು ಕಂಡು ಬಂದಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಎಂದರು.
ಮ್ಯಾರಥಾನ್ ಓಟವು ರವೀಂದ್ರನಾಥ ಕಡಲತೀರದಿಂದ ಪ್ರಾರಂಭವಾಗಿ ಬಿಲ್ಟ್ ಸರ್ಕಲ್, ಸವಿತ, ಮಾಲಾದೇವಿ, ಕಾಜುಭಾಗ್, ಅರ್ಜುನ ಚಿತ್ರ ಮಂದಿರ, ಎಸ್.ಪಿ ಆಫೀಸ್ ಮೂಲಕ ರವೀಂದ್ರನಾಥ್ ಟಾಗೋರ್ ಕಡಲತೀರದಲ್ಲಿ ತಲುಪಿ ಮುಕ್ತಾಯವಾಯಿತು.
ವಿಜೇತರು: ಪುರುಷ ವಿಭಾಗದಲ್ಲಿ ಕಾರ್ತಿಕ್ ಆರ್ ನಾಯ್ಕ ಪ್ರಥಮ, ಸಂದೀಪ್ ಪೂಜಾರ ದ್ವಿತೀಯ, ಗುರುರಾಜ್ ಹೆಗಡೆ ತೃತೀಯ, ಮಹಿಳಾ ವಿಭಾಗದಲ್ಲಿ ಪೂರ್ವಿ ಟಿ ಹರಿಕಂತ್ರ ಪ್ರಥಮ, ಸುಪ್ರಿತಾ ಸಿ ಚನ್ನಯ್ಯ ದ್ವಿತೀಯ, ಸಾವಿತ್ರಿ ಮೀರಾಶಿ ತೃತೀಯ ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಈಶ್ವರ ಕಾಂದೂ, ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ್ ಅಂಕೋಲೆಕರ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬೋಪಣ್ಣ, ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಠ ಡಾ. ಸಂಜು ತಮ್ಮಣ್ಣ ನಾಯಕ, ಚಲನಚಿತ್ರ ನಟಿಯರಾದ ಬೃಂದಾ ಆಚಾರ್ಯ, ಅದಿತಿ ಶ್ರೀವಾಸ್ತವ್, ಜಯಾ ಪಟೇರಿಯಾ, ಕದಂಬ ನೌಕಾನೆಲೆಯ ಕಮಾಂಡರ್ ಗುರು, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್, ಕೈಗಾ ಸೈಟ್ ಮ್ಯಾನೇಜರ್, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು.