ಬಾಲಮಂದಿರದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಸೂಕ್ತ ತನಿಖೆಗೆ ಭಂಡಾರಿ ಸಮಾಜ ಮನವಿ
ಬಾಲಮಂದಿರದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಸೂಕ್ತ ತನಿಖೆಗೆ ಭಂಡಾರಿ ಸಮಾಜ ಮನವಿ

ಕಾರವಾರ: ಕಳೆದ ಗುರುವಾರ ಮಾ.6 ರಂದು ನಗರದ ಬಾಲಕಿಯರ ಬಾಲಮಂದಿರದಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ತಾಲ್ಲೂಕಿನ ಭಂಡಾರಿ ಸಮಾಜೋನ್ನತಿ ಸಂಘ ಮನವಿ ಮಾಡಿದೆ.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮೃತ ವಿದ್ಯಾರ್ಥಿನಿ ಕುಟುಂಬಸ್ಥರು ಹಾಗೂ ಭಂಡಾರಿ ಸಮಾಜದ ಸದಸ್ಯರು, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ.ಕೆ ಅವರಿಗೆ ಮನವಿ ಸಲ್ಲಿಸಿದರು.
ನಗರದ ಕೋಡಿಭಾಗ್ ಮೂಲದವಳಾಗಿದ್ದ ದಿ.ಶೈಲೇಶ್ ಫಣಿಕ್ಕರ್ ಹಾಗೂ ಅಶ್ವಿನಿ ಶೈಲೇಶ್ ಫಣಿಕ್ಕರ್ ದಂಪತಿಯ ತೃತೀಯ ಪುತ್ರಿ ಶ್ವೇತಾ ಶೈಲೇಶ್ ಫಣಿಕ್ಕರ್ (16), ಕಾರವಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲಮಂದಿರದಲ್ಲಿದ್ದು, ಎಸ್ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಳು. ತೀರಾ ಬಡ ಕುಟುಂಬದ ಮೂಲದಿಂದ ಬಂದಿದ್ದ ವಿದ್ಯಾರ್ಥಿನಿಗೆ ತಂದೆ ಇಲ್ಲವಾಗಿದ್ದು, ತಾಯಿ ಅಶ್ವಿನಿ ಶೈಲೇಶ್ ಫಣಿಕ್ಕರ್ ಕೂಲಿ ಕೆಲಸ ಮಾಡಿ ತಮ್ಮ ನಾಲ್ವರು ಮಕ್ಕಳನ್ನು ಸಾಕುತ್ತಿದ್ದರು. ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಪುತ್ರಿ ಶ್ವೇತಾಳನ್ನು ಬಾಲಕಿಯರ ಬಾಲಮಂದಿರದಲ್ಲಿ ಇರಿಸಿ ಓದಿಸುತ್ತಿದ್ದರು.
ಕಳೆದ ಮಾರ್ಚ್ 6 ರಂದು ಬೆಳಿಗ್ಗೆ ವಿದ್ಯಾರ್ಥಿನಿ ಶ್ವೇತಾ ಹಾಸ್ಟೆಲ್ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲಮಂದಿರದ ವಾರ್ಡನ್ ಹಾಗೂ ಸಿಬ್ಬಂದಿಯೇ ಇದಕ್ಕೆ ಕಾರಣರಾಗಿದ್ದಾರೆ. ಈ ಕುರಿತು ಈಗಾಗಲೇ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ಸಹ ದಾಖಲಿಸಿದ್ದು, ಆದರೆ ಇದುವರೆಗೂ ಯಾವೊಬ್ಬ ಸಿಬ್ಬಂದಿ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಹೀಗಾಗಿ ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಂಡು ಮೃತ ವಿದ್ಯಾರ್ಥಿನಿ ಸಾವಿಗೆ ಹಾಗೂ ಮಗಳನ್ನು ಕಳೆದುಕೊಂಡ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಭಂಡಾರಿ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.