ಬೋಟ್ ಇಲ್ಲದೇ 8 ಕಿ.ಮೀ ಸಮುದ್ರದಲ್ಲಿ ಈಜಿ ದಡ ಸೇರಿದ ಮೀನುಗಾರ
ಬೋಟ್ ಇಲ್ಲದೇ 8 ಕಿ.ಮೀ ಸಮುದ್ರದಲ್ಲಿ ಈಜಿ ದಡ ಸೇರಿದ ಮೀನುಗಾರ

ಕಾರವಾರ: ಸಾಂಪ್ರದಾಯಿಕ ದೋಣಿ ಮೂಲಕ ಮೀನುಗಾರಿಕೆ ನಡೆಸುತ್ತಿದ್ದ ಬೋಟೊಂದನ್ನು ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ಗಳು ಎಳೆದೊಯ್ದ ಪರಿಣಾಮ ಮೀನುಗಾರ ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿ 8 ಕಿ.ಮೀ ಈಜಿ ದಡ ಸೇರಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಸಾಂಪ್ರದಾಯಿಕ ಬೋಟ್ ಮೂಲಕ ಮೀನುಗಾರಿಕೆಗೆ ತೆರಳಿದ್ದ ಕಾರವಾರದ ಮಹೇಶ್ ವಿಠ್ಠಲ್ ಸಾಳಗಾಂವಕರ್ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಬೋಟಗಳು ಇವರ ಬೋಟ್‌ಗಳನ್ನು ಏಳೆದುಕೊಂಡು ತೆರಳಿದ್ದವು. ಈ ವೇಳೆ ಮೀನುಗಾರ ಮಹೇಶ್ ಎಷ್ಟೇ ಕೂಗಿಕೊಂಡರೂ ಬೋಟ್‌ನವರು ನಿಲ್ಲಿಸಿಲ್ಲ. ಕೊನೆಗೆ ಮೊಬೈಲ್ ಮೂಲಕ ಹೆಂಡತಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ತಾನು ಬದುಕಿ ಬರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬಳಿಕ ತಮ್ಮ ಬಳಿ ಇದ್ದ ಚಾಕುವಿನಿಂದ ಬಲೆ ಕಟ್ ಮಾಡಿಕೊಂಡು ಸಮುದ್ರಕ್ಕೆ ಜಿಗಿದಿದ್ದು ರಾತ್ರಿಯಿಡಿ ಸಮುದ್ರದಲ್ಲಿ ಈಜಾಡಿಕೊಂಡು ಮಂಗಳವಾರ ಮುಂಜಾನೆ ವೇಳೆ ಗೋವಾದ ಕಾಣಕೋಣ ಬಳಿ ದಡ ಸೇರಿದ್ದರು. ಬಳಿಕ ಅಲ್ಲಿಯೇ ಇದ್ದ ಮೀನುಗಾರರ ಸಹಕಾರದಲ್ಲಿ ಮನೆಯವರಿಗೆ ಪೋನ್ ಮಾಡಿಸಿ ನಂತರ ಅವರಿಗೆ ಗೋವಾದಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಕಾರವಾರದ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೀನುಗಾರ ಜಯರಾಮ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಹೇಶ್ ಅವರ ಬಳಿ ವಿಚಾರಿಸಿದಾಗ ಮಂಗಳೂರಿನ ಬೋಟ್ಗಗಳು ಎಳೆದೊಯ್ದಿದ್ದು ಅದರಲ್ಲಿ ಮನಾಲ್ ಹೆಸರಿನ ಯಾಂತ್ರಿಕ ಬೋಟ್ ಇತ್ತು ಎಂದು ಮಾಹಿತಿ ನೀಡಿದ್ದರು. ಅದರಂತೆ ಮನಾಲ್ ಬೋಟ್‌ನ್ನು ಮೀನುಗಾರರು ಪತ್ತೆ ಮಾಡಿ ಎಳೆದು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಮೀನುಗಾರ ಮಹೇಶ್ ಸಾಳಗಾಂವಕರ್ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ ಎಂದು ಜಯರಾಮ್ ತಿಳಿಸಿದ್ದಾರೆ.