ಬೋಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೀನುಗಾರನ ಶವ ಪತ್ತೆ : 8 ಲಕ್ಷ ಪರಿಹಾರ ನೀಡಿದ ಬೋಟ್ ಮಾಲೀಕ
ಬೋಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೀನುಗಾರನ ಶವ ಪತ್ತೆ : 8 ಲಕ್ಷ ಪರಿಹಾರ ನೀಡಿದ ಬೋಟ್ ಮಾಲೀಕ

ಗೋಕರ್ಣ: ಗೋವಾದ ಮೀನುಗಾರಿಕಾ ಬೋಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಇಲ್ಲಿಯ ಸಮೀಪದ ಬೆಲೆಹಿತ್ತಲು ಗ್ರಾಮದ ಮೀನುಗಾರ ಅನಂತ ಬೀರಪ್ಪ ಅಂಬಿಗ (52) ಈತನ ಸಾವಿಗೆ ಸಂಬಂಧಿಸಿದಂತೆ ಕುಟುಂಬಸ್ಥರ ಆಗ್ರಹದಂತೆ ಬೋಟ್ ಮಾಲೀಕ 8 ಲಕ್ಷ ರೂ. ಕುಟುಂಬಸ್ಥರಿಗೆ ಪರಿಹಾರ ನೀಡುವ ಮೂಲಕ ಈ ಪ್ರಕರಣ ಇತ್ಯರ್ಥಗೊಂಡಿದೆ.
ಘಟನೆ ಹಿನ್ನಲೆ: ಮೃತ ಅನಂತ ಬೀರಪ್ಪ ಅಂಬಿಗ ಈತನು ಗೋವಾಕ್ಕೆ ತೆರಳಿ ಎಪ್ರಿಲ್ 7 ರಂದು ಬೋಟ್‌ನಲ್ಲಿ ಕೆಲಸ ಮಾಡಲು ತೆರಳಿದ್ದನು. ಆದರೆ ಈತ ಬೋಟ್‌ನಲ್ಲಿ ಬಂದದ್ದು ಇತರೇ ಮೀನುಗಾರರು ಗುರುತಿಸಿದ್ದಾರೆ ಇಲ್ಲವೋ ತಿಳಿದಿಲ್ಲ. ನಾಲ್ಕು ದಿನದ ನಂತರ ವಾಸನೆ ಬರುತ್ತಿದ್ದಂತೆ ಈ ಹಿಂದೆ ಬೋಟ್‌ನಲ್ಲಿ ಕೆಲಸಕ್ಕಿದ್ದ ಅನಂತ ಅಂಬಿಗ ಈತನು ಬೋಟ್‌ನ ಮಷೀನ್ ಯಂತ್ರದ ಒಳಗಡೆ ಸತ್ತಿರುವುದು ಕಂಡು ಬಂದಿದೆ. ನಂತರ ಬೋಟ್‌ನವರು ತದಡಿ ಬಂದರಿಗೆ ಬೋಟ್‌ನ್ನು ತೆಗೆದುಕೊಂಡು ಬಂದಿದ್ದರು, ನಂತರ ಪೊಲೀಸರಿಗೆ ಮಾಹಿತಿ ನೀಡಿದರು.
ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಸ್ಥಳವನ್ನು ಗೋಕರ್ಣದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂಧರ್ಭದಲ್ಲಿ ಕುಟುಂಬಸ್ಥರು ಹಾಗೂ ಮುಖಂಡರುಗಳು ಆಗಮಿಸಿ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ಬೋಟ್ ಮಾಲಿಕ ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು. ಗೋವಾದಲ್ಲಿ ಇರುವ ಬೋಟ್ ಮಾಲೀಕ ತನ್ನ ಸಂಬಂಧಿ ಒಬ್ಬರನ್ನು ಕಳುಹಿಸಿ 8 ಲಕ್ಷ ರೂ. ಪರಿಹಾರ ನೀಡುವ ಮೂಲಕ ಈ ಪ್ರಕರಣ ಅಂತ್ಯಗೊಂಡಿದೆ.