ಮಳೆಗೆ ಜಲಾವೃತವಾಗುತ್ತಿರುವ ಕಾರವಾರ ಡಿಪೋ ಅಂಕೋಲಾಕ್ಕೆ ಸ್ಥಳಾಂತರ: ಶಾಸಕ ಸೈಲ್ ಭೇಟಿ ಪರಿಶೀಲನೆ
ಮಳೆಗೆ ಜಲಾವೃತವಾಗುತ್ತಿರುವ ಕಾರವಾರ ಡಿಪೋ ಅಂಕೋಲಾಕ್ಕೆ ಸ್ಥಳಾಂತರ: ಶಾಸಕ ಸೈಲ್ ಭೇಟಿ ಪರಿಶೀಲನೆ

ಮಳೆಗೆ ಜಲಾವೃತವಾಗುತ್ತಿರುವ ಕಾರವಾರ ಡಿಪೋ ಅಂಕೋಲಾಕ್ಕೆ ಸ್ಥಳಾಂತರ: ಶಾಸಕ ಸೈಲ್ ಭೇಟಿ ಪರಿಶೀಲನೆ
ಕಾರವಾರ: ಮಳೆಗಾಲದಲ್ಲಿ ಪದೇ ಪದೇ ನೀರು ನುಗ್ಗುತ್ತಿರುವ ಹಿನ್ನಲೆ ಸ್ಥಳಾಂತರ ಗೊಳಿಸಲಾಗುತ್ತಿರುವ ನಗರದ ಕೆಎಸ್ಆರ್‌ಟಿಸಿ ಡಿಪೋಕ್ಕೆ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಹಬ್ಬುವಾಡ ರಸ್ತೆಯಲ್ಲಿರುವ ಸಾರಿಗೆ ಘಟಕಕ್ಕೆ ಪ್ರತಿ ಮಳೆಗಾಲದಲ್ಲಿ ನೀರು ನುಗ್ಗಿ ಹಳ್ಳದಂತಾಗುತ್ತಿದ್ದು, ಇದರಿಂದ ಬಸ್ಸುಗಳು, ಇಂಧನ ಘಟಕ ಹಾಗೂ ಕಚೇರಿಗೆ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನಲೆ ಕಾರವಾರ ಡಿಪೋವನ್ನು ತಾತ್ಕಾಲಿಕವಾಗಿ ಅಂಕೋಲಾಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಡಿಪೋ ಒಳಗಿನಿಂದ ನೀರು ಹರಿದುಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದ್ದು, ನೀರು ಹರಿದುಹೋಗುವ ಕಾಲುವೆಯನ್ನು ಸ್ವಚ್ಛಗೊಳಿಸಿಕೊಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನದಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆ ಮೇಲೆ ಅವಲಂಬಿತರಾಗುವುದರಿಂದ ಗ್ರಾಮೀಣ ಹಾಗೂ ಸ್ಥಳೀಯ ಬಸ್ಸುಗಳ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಗ್ರಾಮೀಣ ಮಾರ್ಗಗಳಿಗೆ ಸಂಚರಿಸುವ ಕೆಲ ಬಸ್ಸುಗಳನ್ನು ಹೊರತುಪಡಿಸಿ ಇತರೆ ಮಾರ್ಗಗಳ ಬಸ್ಸುಗಳನ್ನು ಅಂಕೋಲಾ ಡಿಪೋದಿಂದ ನಡೆಸುವಂತೆ ಶಾಸಕರು ಸೂಚನೆ ನೀಡಿದರು. ಒಂದೊಮ್ಮೆ ಮಳೆ ಬಿದ್ದ ಸಂದರ್ಭದಲ್ಲಿ ಮತ್ತೆ ಡಿಪೋ ಜಲಾವೃತವಾದಲ್ಲಿ ಸಂಪೂರ್ಣ ಸ್ಥಳಾಂತರ ಕೈಗೊಳ್ಳುವಂತೆ ತಿಳಿಸಿದರು.
ಇನ್ನು ಕಾರವಾರ ಡಿಪೋವನ್ನು ನೂತನವಾಗಿ ನಿರ್ಮಿಸಲು ಸರ್ಕಾರದಿಂದ ಮೊದಲ ಹಂತವಾಗಿ 4 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಕಾಮಗಾರಿಯೂ ಆರಂಭವಾಗಿದೆ. ಮೊದಲು ಬಸ್ ರಿಪೇರಿ ಶೆಡ್ ಕಾಮಗಾರಿ ಕೈಗೊಳ್ಳಬೇಕಿದ್ದು, ಆಡಳಿತ ಕಚೇರಿ ಕಟ್ಟಡದ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಜೂನ್ ವೇಳೆಗೆ ಮುಕ್ತಾಯಗೊಳ್ಳಬೇಕಿದ್ದ ಕಾಮಗಾರಿ ಕಾರಣಾಂತರಗಳಿಂದ ಇದುವರೆಗೂ ಸಹ ಪೂರ್ಣಗೊಂಡಿಲ್ಲವಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಕ್ಕೆ ಸೂಚನೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್ಆರ್‌ಟಿಸಿ ಡಿಸಿ ಬಸವರಾಜ ಹಮ್ಮಣ್ಣನವರ್, ತಹಶೀಲ್ದಾರ್ ಎನ್.ಎಸ್.ನರೋನಾ, ನಗರಸಭೆ ಆಯುಕ್ತರಾದ ಜಗದೀಶ ಹುಲಿಗೆಜ್ಜಿ ಸೇರಿ ಹಲವರು ಇದ್ದರು.