ಅಂಥ ಇಂಥ ಬಟ್ಟೆ ಧರಿಸಿದರೆ ದೇವಾಲಯದಲ್ಲಿ ಪ್ರವೇಶ ಇಲ್ಲ.
ಪ್ರವಾಸಿಗರೇ ಗಮನಿಸಿ: ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಪ್ರವಾಸಿಗರೇ ಗಮನಿಸಿ: ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ
ಭಟ್ಕಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಇನ್ನು ಮುಂದೆ ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲನೆ ಮಾಡಬೇಕಿದೆ. ದೇವಾಲಯದ ಆಡಳಿತ ಮಂಡಳಿಯು ವಸ್ತ್ರ ಸಂಹಿತೆ ಜಾರಿಗೊಳಿಸಿ ದೇವಸ್ಥಾನ ಪ್ರವೇಶಿಸುವವರಿಗೆ ವಸ್ತ್ರ ನಿಯಮವನ್ನು ಜಾರಿಗೆ ತಂದಿದೆ.
ದೇವಾಲಯದೊಳಗೆ ಪ್ರವೇಶಿಸಲು ಭಕ್ತರು ಭಾರತೀಯ ಪಾರಂಪರಿಕ ಉಡುಪುಗಳನ್ನೇ ಧರಿಸಿರಬೇಕಿದೆ. ಪುರುಷರು ಅಂಗಿ ಮತ್ತು ಪಂಚೆ ಅಥವಾ ಪ್ಯಾಂಟ್ ಹಾಗೂ ಮಹಿಳೆಯರು ಸೀರೆ ಅಥವಾ ಚೂಡಿದಾರ ಧರಿಸುವುದು ಕಡ್ಡಾಯವಾಗಿದೆ.
ಈ ನಿಯಮದ ಬಗ್ಗೆ ಪ್ರವಾಸಿಗರಿಗೆ, ಭಕ್ತರಿಗೆ ಸೂಚನೆ ನೀಡಲು ದೇವಾಲಯದ ಪ್ರವೇಶದ್ವಾರದ ಎದುರುಗಡೆ ಸೂಚನಾ ಫಲಕಗಳನ್ನು ಆಡಳಿತ ಮಂಡಳಿಯು ಅಳವಡಿಸಿದೆ.
ಈ ಹಿಂದೆ ದೇವಾಲಯಕ್ಕೆ ಭೇಟಿ ನೀಡುವ ಅನೇಕ ಪ್ರವಾಸಿಗರು ಹಾಗೂ ಭಕ್ತರು ಅನುಚಿತವಾದ ಅಥವಾ ಬೇಕಾಬಿಟ್ಟಿಯಾದ ಬಟ್ಟೆಗಳನ್ನು ಧರಿಸಿ ಪ್ರವೇಶಿಸುತ್ತಿದ್ದ ಕುರಿತು ಆರೋಪಗಳು ಕೇಳಿಬಂದಿದ್ದವು. ಧಾರ್ಮಿಕ ಕ್ಷೇತ್ರವಾದ ಮುರ್ಡೇಶ್ವರ ಮಾತ್ಹೋಬಾರ ದೇವಸ್ಥಾನದಲ್ಲಿ ಕಡ್ಡಾಯವಾಗಿ ವಸ್ತ್ರಸಂಹಿತೆ ಜಾರಿಗೊಳಿಸುವಂತೆ ಹಲವಾರು ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸಿದ್ದವು.
ಅದರಂತೆ ಭಕ್ತಾದಿಗಳ ಭಾವನೆಗಳನ್ನು ಗೌರವಿಸುವುದರ ಜೊತೆಗೆ ದೇವಾಲಯದ ಪವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ, ಆಡಳಿತ ಮಂಡಳಿಯು ಬಹುಕಾಲದ ಬೇಡಿಕೆಯಾಗಿದ್ದ ವಸ್ತ್ರ ಸಂಹಿತೆಯನ್ನು ಇದೀಗ ಜಾರಿಗೆ ತಂದಿದೆ.