ಈ ಬಸ್ ನಿಲ್ದಾಣ ಕಾಡು ಪ್ರಾಣಿಗಳ ಫೇವರೇಟ್ ಪ್ಲೇಸ್!
ಈ ಬಸ್ ನಿಲ್ದಾಣ ಕಾಡು ಪ್ರಾಣಿಗಳ ಫೇವರೇಟ್ ಪ್ಲೇಸ್!

ಜೋಯಿಡಾ: ಸಾಮಾನ್ಯವಾಗಿ ಬಸ್ ತಂಗುದಾಣಗಳಲ್ಲಿ ವಿವಿಧೆಡೆ ತೆರಳುವ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಆದರೆ ಇಲ್ಲೊಂದು ಬಸ್ ನಿಲ್ದಾಣದಲ್ಲಿ ಇದೀಗ ಜನರಂತೆ ಕಾಡುಪ್ರಾಣಿಗಳು ಬಂದು ಕೂರುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಜೋಯಿಡಾ ತಾಲ್ಲೂಕಿನ ಗಣೇಶಗುಡಿಯ ಅವೇಡಾ ರಸ್ತೆಯಲ್ಲಿರುವ ಬಸ್ ತಂಗುದಾಣವೊಂದರಲ್ಲಿ ರಾತ್ರಿ ವೇಳೆ ಕರಡಿಯೊಂದು ವಿಶ್ರಾಂತಿಗೆ ಕುಳಿತಿರುವುದು ಕಂಡುಬಂದಿದೆ. ಮಂಗಳವಾರ ರಾತ್ರಿ ಸುಮಾರು 10 ವೇಳೆಗೆ ಬಸ್ ತಂಗುದಾಣದ ಕಟ್ಟೆಯ ಮೇಲೆ ಕರಡಿ ಕುಳಿತಿದೆ.
ರಾತ್ರಿ ಕರ್ತವ್ಯ ಮುಗಿಸಿ ಮನೆಯತ್ತ ಹೊರಟಿದ್ದ ಖಾಸಗಿ ರೆಸಾರ್ಟ್ ಸಿಬ್ಬಂದಿಯೋರ್ವರು ಬಸ್ ನಿಲ್ದಾಣದತ್ತ ಕಣ್ಣು ಹಾಯಿಸಿದಾಗ ಏನೋ ಇದ್ದಂತೆ ಕಂಡುಬಂದಿದೆ. ಕೂಡಲೇ ಕುತೂಹಲದಿಂದ ಬಸ್ ನಿಲ್ದಾಣದತ್ತ ಟಾರ್ಚ್ ಹಾಯಿಸಿದಾಗ ಶಾಕ್ ಆಗಿದ್ದಾರೆ. ಬಸ್ ನಿಲ್ದಾಣದ ಕಟ್ಟೆಯ ಮೇಲೆ ವಯಸ್ಕ ಕರಡಿಯೊಂದು ಮಲಗಿ ವಿಶ್ರಾಂತಿ ಪಡೆಯುತ್ತಿದೆ.
ಟಾರ್ಚ್ ಬೆಳಕು ಕಾಣುತ್ತಿದ್ದಂತೆ ಎಚ್ಚೆತ್ತ ಕರಡಿ ಅತ್ತಿಂದಿತ್ತ ಓಡಾಡಿದೆ. ಕೂಡಲೇ ಆತಂಕಗೊಂಡ ರೆಸಾರ್ಟ್ ಸಿಬ್ಬಂದಿ ತಮ್ಮ ಮೊಬೈಲ್ ತೆಗೆದು ಕರಡಿ ಓಡಾಟದ ದೃಶ್ಯ ಸೆರೆಹಿಡಿದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಚಿರತೆಯೊಂದು ಇದೇ ಬಸ್ ತಂಗುದಾಣದಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದರು. ಇದೀಗ ಇದೇ ಸ್ಥಳದಲ್ಲಿ ಕರಡಿ ಕಾಣಿಸಿಕೊಂಡಿದ್ದು, ಬಸ್ ನಿಲ್ದಾಣ ಕಾಡು ಪ್ರಾಣಿಗಳ ವಿಶ್ರಾಂತಿ ಗೃಹವಾದಂತೆ ಕಂಡುಬಂದಿದೆ. ಆದರೆ ಇದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.