ಕೆಲ ಶಾಸಕರಿಗೆ ಅಭಿವೃದ್ಧಿ ಕೆಲಸ ನಿಧಾನವಾಗುತ್ತಿರುವುದಕ್ಕೆ ಅಸಮಾಧಾನವಿದೆ: ಆರ್.ವಿ.ದೇಶಪಾಂಡೆ
ಕೆಲ ಶಾಸಕರಿಗೆ ಅಭಿವೃದ್ಧಿ ಕೆಲಸ ನಿಧಾನವಾಗುತ್ತಿರುವುದಕ್ಕೆ ಅಸಮಾಧಾನವಿದೆ: ಆರ್.ವಿ.ದೇಶಪಾಂಡೆ

ಕಾರವಾರ: ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಕೆಲವು ಶಾಸಕರಿಗೆ ಅಭಿವೃದ್ಧಿ ಕಾರ್ಯಗಳು ನಿಧಾನವಾಗುತ್ತಿರುವುದರ ಬಗ್ಗೆ ಅಸಮಾಧಾನ ಇದೆಯೆಂದು ಅವರು ಹೇಳಿದರು.
ಕಾರವಾರದಲ್ಲಿ ಕೆಡಿಪಿ ಸಭೆಗೆ ಆಗಮಿಸಿದ್ದ ವೇಳೆ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕೆಲವು ಶಾಸಕರು ಮಂತ್ರಿ ಅಥವಾ ಅಧ್ಯಕ್ಷರಾಗಬೇಕೆಂಬ ಆಸೆ ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ಮಾಧ್ಯಮಗಳ ಬಳಿ ಹೋಗುವುದರಿಂದ ಹೆಡ್ಲೈನ್ಗಳು ಸಿಗುತ್ತವೆ” ಎಂದು ದೇಶಪಾಂಡೆ ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ನ ಪೂರ್ಣ ಬೆಂಬಲ ಇದೆ. ಶಾಸಕರು ಯಾವುದೇ ಸಮಸ್ಯೆಗಳಿದ್ದರೆ ಪಕ್ಷದ ನಾಯಕರು ಸುರ್ಜೇವಾಲಾ ಅವರನ್ನು ಸಂಪರ್ಕಿಸಿ ಪರಿಹಾರ ಕೇಳಬಹುದು ಎಂದರು.
2013-18ರ ಅವಧಿಯ ಸಿದ್ದರಾಮಯ್ಯರಿಗಿದ್ದ ‘ಗತ್ತು’ ಈಗ ಇಲ್ಲವೇ ಎಂಬ ಪ್ರಶ್ನೆಗೆ, “ಹಳೇ ಸಿದ್ದರಾಮಯ್ಯರಂತೆ ಈಗ ಅವರು ಹೇಗೆ ಇರಬಲ್ಲರು? ನಾನೇ ನೋಡಿ, ಹಿಂದಿನ ದೇಶಪಾಂಡೆ ಮತ್ತು ಇಂದಿನ ದೇಶಪಾಂಡೆ ಒಂದೇ ಆಗಿರುವುದಿಲ್ಲ,” ಎಂದು ಉದಾಹರಣೆ ನೀಡಿದರು.
ಸಿದ್ದರಾಮಯ್ಯ ಅವರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದೂ, ಆಡಳಿತದಲ್ಲಿ ಎಲ್ಲವನ್ನೂ ನೇರವಾಗಿ ಹೇಳಿ ಮಾಡಿಸಲು ಸಾಧ್ಯವಿಲ್ಲವೆಂದೂ ತಿಳಿಸಿದರು. “ಸಿದ್ದರಾಮಯ್ಯ ಅವರ ತಾಳ್ಮೆ ನನಗಿಂತಲೂ ಹೆಚ್ಚು,” ಎಂದು ಹೇಳಿದರು.
ದಸರಾ ಉದ್ಘಾಟನೆಯನ್ನು ಬೇರೆ ಮುಖ್ಯಮಂತ್ರಿ ಮಾಡಬೇಕೆಂಬ ಅಶೋಕ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, “ಪಾಪ ಅಶೋಕ! ತಮ್ಮ ಖುರ್ಚಿ ಉಳಿಸಿಕೊಳ್ಳಲು ಹೇಳಬೇಕಾಗಿದೆ. ಅವರು ಹೇಳದಿದ್ದರೆ ಬೇರೆ ಯಾರು ಹೇಳುತ್ತಾರೆ?” ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದ ಮಾಧ್ಯಮಗಳ ಸುದ್ದಿಗಳನ್ನು ಟೀಕಿಸಿದರು. “ಮಾಧ್ಯಮಗಳ ಸುದ್ದಿಗಳನ್ನು ನೋಡಿ ಸರ್ಕಾರ ಬೀಳುತ್ತದೆಂದು ಹೇಳುತ್ತಿದ್ದಾರೆ. ಅಶೋಕ ನಿದ್ದೆಯಲ್ಲಿದ್ದಾನೆ ಎನ್ನಿಸುತ್ತದೆ,” ಎಂದರು.
“ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರುವುದು ನಿಶ್ಚಿತ. ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆಯೇ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ,” ಎಂದರು.
ಐದು ಗ್ಯಾರಂಟಿ ಯೋಜನೆಗೆ 58 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಪ್ರತಿ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ನೀಡಲಾಗಿದೆ. ಆದರೆ, ಹಣದ ಬಿಡುಗಡೆ ಮತ್ತು ಕೆಲಸಗಳ ಪ್ರಾರಂಭದಲ್ಲಿ ತಡವಾಗುವ ಸಮಸ್ಯೆ ಇದೆ ಎಂದು ಒಪ್ಪಿಕೊಂಡರು. “ಈ ಸಮಸ್ಯೆ ಹಿಂದೆಯೂ ಇತ್ತು, ಈಗ ಸ್ವಲ್ಪ ಹೆಚ್ಚಾಗಿದೆ,” ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದೂ, ಸತೀಶ್ ಜಾರಕಿಹೊಳಿ ಒಬ್ಬ ಉತ್ತಮ ವ್ಯಕ್ತಿಯೆಂದೂ ಹೇಳಿದರು. “ಅವರು ಅಧ್ಯಕ್ಷರಾಗುತ್ತಾರೆಯೋ ಇಲ್ಲವೋ ಎಂಬುದು ನಿರ್ಧಾರವಾಗಬೇಕು,” ಎಂದರು.