ದೋಣಿ ಮಗುಚಿ ಓರ್ವ ಮೀನುಗಾರ ಸಾವು, ಇನ್ನೋರ್ವ ಕಣ್ಮರೆ: ಓರ್ವನ ರಕ್ಷಣೆ
ದೋಣಿ ಮಗುಚಿ ಓರ್ವ ಮೀನುಗಾರ ಸಾವು, ಇನ್ನೋರ್ವ ಕಣ್ಮರೆ: ಓರ್ವನ ರಕ್ಷಣೆ

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯೊಂದು ಮಗುಚಿದ ಪರಿಣಾಮ ಅಸ್ವಸ್ಥಗೊಂಡಿದ್ದ ಓರ್ವ ಮೀನುಗಾರ ಸಾವನ್ನಪ್ಪಿ, ಇನ್ನೋರ್ವ ಮೀನುಗಾರ ಸಮುದ್ರದಲ್ಲಿ ಕಣ್ಮರೆಯಾದ ಘಟನೆ ತಾಲ್ಲೂಕಿನ ಮುರ್ಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಸಂಭವಿಸಿದೆ.
ಮಾಧವ ಹರಿಕಾಂತ(45) ಮೃತ ಮೀನುಗಾರನಾಗಿದ್ದು, ವೆಂಕಟೇಶ ಅಣ್ಣಪ್ಪ ಹರಿಕಾಂತ(26) ನಾಪತ್ತೆಯಾದ ಮೀನುಗಾರನಾಗಿದ್ದಾನೆ. ಬೋಟಿನಲ್ಲಿದ್ದ ಇನ್ನೋರ್ವ ಮೀನುಗಾರ ಆನಂದ್ ಅಣ್ಣಪ್ಪ ಹರಿಕಾಂತ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.
ಮೂವರೂ ಬೆಳಿಗ್ಗೆ ಗಿಲ್ನೆಟ್ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿದ್ದು ಪರಿಣಾಮ ಓರ್ವ ಮೀನುಗಾರ ಸಮುದ್ರದಲ್ಲಿ ಕಣ್ಮರೆಯಾದರೆ, ಇನ್ನೋರ್ವ ನೀರು ಕುಡಿದು ಅಸ್ವಸ್ಥನಾಗಿದ್ದು, ಮತ್ತೊಂದು ಬೋಟ್ ಸಹಾಯದಿಂದ ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಅಸ್ವಸ್ಥಗೊಂಡಿದ್ದ ಮೀನುಗಾರನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯೆ ಆತ ಕೊನೆಯುಸಿರೆಳೆದಿದ್ದಾನೆ.
ಸದ್ಯ ಕಣ್ಮರೆಯಾದ ಮೀನುಗಾರನಿಗಾಗಿ ಶೋಧ ಮುಂದುವರೆದಿದ್ದು, ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.