⁠International

ರಾಮತೀರ್ಥ ಗುಡ್ಡದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳು

ರಾಮತೀರ್ಥ ಗುಡ್ಡದ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳು

 

ಗೋಕರ್ಣ: ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀಧರ್ ಎಸ್.ಆರ್ ಹಾಗೂ ಸಿಬ್ಬಂದಿ ತಂಡವು ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಗುಡ್ಡದ ಮೇಲಿರುವ ಕಾಡಿನೊಳಗಿನ ಒಂದು ಗುಹೆಯಲ್ಲಿ ಯಾರೋ ಅಪರಿಚಿತರು ವಾಸಿಸುತ್ತಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಗುಹೆಯನ್ನು ಪರಿಶೀಲಿಸಿದರು.

ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ, ಅಲ್ಲಿ ರಷ್ಯಾ ಮೂಲದ ವಿದೇಶಿ ಮಹಿಳೆ ನಿನಾ ಕುಟಿನಾ(40) ಅವರು ತಮ್ಮ ಇಬ್ಬರು ಚಿಕ್ಕ ಹೆಣ್ಣು ಮಕ್ಕಳಾದ 6 ವರ್ಷದ ಕುಮಾರಿ ಪ್ರೇಮಾ ಹಾಗೂ 4 ವರ್ಷದ ಕುಮಾರಿ ಅಮಾ ಅವರೊಂದಿಗೆ ವಾಸಿಸುತ್ತಿರುವುದು ಕಂಡುಬಂದಿದೆ. ವಿಚಾರಣೆ ನಡೆಸಿದಾಗ, ಅವರು ದೇವರ ಪೂಜೆ ಮತ್ತು ಧ್ಯಾನಕ್ಕಾಗಿ ಗೋವಾದಿಂದ ಮಕ್ಕಳೊಂದಿಗೆ ಬಂದಿದ್ದು, ಗುಹೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ರಾಮತೀರ್ಥ ಗುಡ್ಡವು ಹತ್ತಿರದ ಭಾಗದಲ್ಲಿ ಒಮ್ಮೆ ಗುಡ್ಡ ಕುಸಿತ ಸಂಭವಿಸಿದ್ದ ಪರಿಣಾಮ ಅಪಾಯಕಾರಿ ಪ್ರದೇಶವಾಗಿದ್ದು, ಅಲ್ಲದೆ ಹಾವುಗಳು ಸೇರಿದಂತೆ ವಿಷ ಜಂತುಗಳ ವಾಸವಿರುವುದರಿಂದ, ಅಲ್ಲಿ ವಾಸಿಸುವುದು ಅಪಾಯಕಾರಿ ಎಂದು ಮಹಿಳೆಗೆ ಮಾಹಿತಿ ನೀಡಿ, ಮಕ್ಕಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವರಿಕೆ ಮಾಡಿದ್ದಾರೆ.

ತದನಂತರ, ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಗುಹೆಯಿಂದ ಕೆಳಗೆ ಕರೆತಂದು, ಅವರ ಇಚ್ಛೆಯಂತೆ ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಶಂಕರ ಪ್ರಸಾದ ಫೌಂಡೇಶನ್ ಎಂಬ ಎನ್‌ಜಿಒ ಸಂಸ್ಥೆಯ ಯೋಗ ರತ್ನ ಸರಸ್ವತಿ ಸ್ವಾಮೀಜಿ (80) ಅವರ ಆಶ್ರಮಕ್ಕೆ, ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಕರೆದೊಯ್ಯಲಾಗಿದೆ.

ಆಧ್ಯಾತ್ಮಿಕತೆಯ ಅಭಿಮಾನಿಯಾಗಿರುವ ಈ ವಿದೇಶಿ ಮಹಿಳೆ ಭಾರತದಲ್ಲೇ ಉಳಿಯುವ ಉದ್ದೇಶದಿಂದ ಪಾಸಪೋರ್ಟ್ ಮತ್ತು ವೀಸಾ ವಿವರಗಳನ್ನು ನೀಡಲು ನಿರಾಕರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಮಾಲೋಚನೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳು, ಯೋಗರತ್ನ ಸರಸ್ವತಿ ಸ್ವಾಮೀಜಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಮಾಲೋಚನೆಗೆ ಒಳಪಡಿಸಿದ್ದು, ಈ ಸಂದರ್ಭದಲ್ಲಿ, ಪಾಸಪೋರ್ಟ್ ಮತ್ತು ವೀಸಾ ಕಾಡಿನಲ್ಲಿ ಅಥವಾ ಗುಹೆಯಲ್ಲೇ ಬಿದ್ದಿರಬಹುದು ಎಂಬ ಮಾಹಿತಿ ಅವರು ನೀಡಿದ್ದಾರೆ.

ಪರಿಣಾಮವಾಗಿ, ತಾಯಿ ಮತ್ತು ಇಬ್ಬರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ದಾಖಲಿಸಿ, ತಾತ್ಕಾಲಿಕವಾಗಿ ಸುರಕ್ಷಿತವಾಗಿ ಇರಿಸಲಾಯಿತು. ಇತ್ತ ಗೋಕರ್ಣ ಪೊಲೀಸ್ ಅಧಿಕಾರಿಗಳು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಶೋಧ ಕಾರ್ಯಾಚರಣೆ ನಡೆಸಿ, ಗುಹೆ ಸುತ್ತಮುತ್ತ ವಿದೇಶಿ ಮಹಿಳೆಯ ಪಾಸಪೋರ್ಟ್ ಮತ್ತು ವೀಸಾ ಪತ್ತೆಹಚ್ಚಿದರು. ಪರಿಶೀಲನೆ ನಡೆಸಿದಾಗ, ವೀಸಾ ಅವಧಿ 17-04-2017 ರಂದು ಮುಕ್ತಾಯವಾಗಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಬೆಂಗಳೂರು ಎಫ್‌ಆರ್‌ಆರ್‌ಒ ಕಚೇರಿಯನ್ನು ಸಂಪರ್ಕಿಸಿ ಪತ್ರವ್ಯವಹಾರ ನಡೆಸಿ, ವೀಸಾ ಅವಧಿ ಮೀರಿದ ಈ ರಷ್ಯಾ ಮೂಲದ ಮಹಿಳೆ ಹಾಗೂ ಮಕ್ಕಳನ್ನು ಮರಳಿ ರಷ್ಯಾಕ್ಕೆ ಕಳಿಸುವ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಜು.14 ರಂದು ಮಹಿಳೆ ಮತ್ತು ಮಕ್ಕಳನ್ನು ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಬೆಂಗಳೂರು ಶಾಂತಿನಗರದಲ್ಲಿರುವ ಎಫ್‌ಆರ್‌ಆರ್‌ಒ ಕಚೇರಿಗೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!