ನಿಷೇಧದ ನಡುವೆ ಕಾಳಿ ನದಿಯಲ್ಲಿ ರ‌್ಯಾಫ್ಟಿಂಗ್: ಜಟ್ಟಿ ಮಾಲೀಕರ ವಿರುದ್ಧ ಕ್ರಮ
ನಿಷೇಧದ ನಡುವೆ ಕಾಳಿ ನದಿಯಲ್ಲಿ ರ‌್ಯಾಫ್ಟಿಂಗ್: ಜಟ್ಟಿ ಮಾಲೀಕರ ವಿರುದ್ಧ ಕ್ರಮ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿ ಕಾರವಾರ ರವರು ದಿನಾಂಕ 01.06.2025 ರಂದು ಜಿಲ್ಲೆಯಲ್ಲಿ ಎಲ್ಲಾ ಸಮುದ್ರ ತೀರ ಹಾಗೂ ನದಿತೀರಗಳಲ್ಲಿ ಬೋಟಿಂಗ್ ಹಾಗೂ ಇತರ ಜಲ ಸಾಹಸ ಕ್ರೀಡೆಗಳನ್ನು ದಿನಾಂಕ 30.09.2025ರವರೆಗೆ ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು.
ಆದರೆ ಈ ಆದೇಶವನ್ನು ಉಲ್ಲಂಘಿಸಿ, ಇಳವಾ ಗ್ರಾಮದ ಕಾಳಿ ನದಿಯಲ್ಲಿ ಕೆಲವು ಜಟ್ಟಿ ಮಾಲೀಕರು ಲಾಭದ ಆಸೆಗಾಗಿ ಪ್ರವಾಸಿಗರ ಪ್ರಾಣಾಪಾಯವನ್ನು ಅಣಕಮಾಡುವ ರೀತಿಯಲ್ಲಿ ನದಿಯಲ್ಲಿ ಬೋಟಿಂಗ್ ಹಾಗೂ ರಾಫ್ಟಿಂಗ್ ನಡೆಸಿದ್ದಾರೆ. ಮಳೆಗಾಲದ ಹಿನ್ನೆಲೆಯಲ್ಲಿ ನದಿ ವೇಗವಾಗಿ ಹರಿಯುತ್ತಿದ್ದರೂ ಕೂಡ, ಈ ಉಲ್ಲಂಘನೆಯಿಂದ ಪ್ರವಾಸಿಗರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದ್ದಿತ್ತು.
ಈ ಕುರಿತು ಸಂಬಂಧಪಟ್ಟ ಮಾಹಿತಿ ತಿಳಿದು ಬಂದ ಹಿನ್ನೆಲೆಯಲ್ಲಿ ರಾಮನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 223(ಎ) ಮತ್ತು 125 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ನಿಷೇಧ ಆದೇಶವನ್ನು ಉಲ್ಲಂಘಿಸಿ ನದಿಗಳಲ್ಲಿ ಬೋಟಿಂಗ್, ಜಲಸಾಹಸ ಕ್ರೀಡೆಗಳು ಅಥವಾ ನಿಷೇಧಿತ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.