ಕಾರಿನ ಮೇಲೆ ಬಿದ್ದ ಬೃಹತ್ ಮರ: ಮಹಿಳೆಗೆ ಗಂಭೀರ ಗಾಯ
ಕಾರಿನ ಮೇಲೆ ಬಿದ್ದ ಬೃಹತ್ ಮರ: ಮಹಿಳೆಗೆ ಗಂಭೀರ ಗಾಯ

ಕಾರವಾರ: ನಿಂತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ನಗರದ ಪಿಕಳೆ ಆಸ್ಪತ್ರೆ ಎದುರು ನಡೆದಿದೆ. ಕಾರು ಮರದ ಬುಡದಲ್ಲೇ ನಿಲ್ಲಿಸಿದ್ದ ಪರಿಣಾಮ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಸಂಪೂರ್ಣ ಜಖಂಗೊಂಡಿದೆ.
ಕಾರಿನೊಳಗೆ ಇದ್ದ ಮಹಿಳೆ ಮರದಡಿ ಸಿಕ್ಕಿಕೊಂಡು ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ತಕ್ಷಣವೇ ಪೊಲೀಸರು, ನಗರಸಭೆ ಸಿಬ್ಬಂದಿ ಹಾಗೂ ತಹಸೀಲ್ದಾರ್ ನೇತೃತ್ವದ ತಾಲೂಕು ಆಡಳಿತದ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
ಮರವನ್ನು ಕತ್ತರಿಸುವ ಮೂಲಕ ಮಹಿಳೆಯನ್ನು ಕಾರಿನಿಂದ ಸುರಕ್ಷಿತವಾಗಿ ಹೊರತೆಗೆಯುವ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಭಾನುವಾರ ಸಂತೆಯಾಗಿದ್ದರಿಂದ ಹೆಚ್ಚಿನ ವಾಹನಗಳ ಓಡಾಟವಿದ್ದು, ಅದೃಷ್ಟವಶಾತ್ ಇತರರಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.
ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಅಕ್ಕಪಕ್ಕದಲ್ಲಿದ್ದ ವಿದ್ಯುತ್ ಕಂಬಗಳು ಮುರಿದಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಪೊಲೀಸರು ಸ್ಥಳದಲ್ಲಿದ್ದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.