ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ: ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೇಡಿಕೆ
ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ: ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೇಡಿಕೆ

ಶಿರಸಿ: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ 766Eಯಲ್ಲಿ ಸಾಗರಮಾಲಾ ಯೋಜನೆಯಡಿ ರಸ್ತೆ ರಿಪೇರಿ ಮಾಡದೇ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯ ಶಿರಸಿ- ಹಾವೇರಿ ರಾಷ್ಟ್ರೀಯ ಹೆದ್ದಾರಿ -766E ನಲ್ಲಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಮಳೆಗಾಲಕ್ಕೆ ಮುಂಚೆ ಈ ರಸ್ತೆಯ ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳದಿದ್ದರಿಂದ ಈಗ ವಾಹನ ಸವಾರರು ಹಾಗೂ ಪ್ರಯಾಣಿಕರು ಅಪಾಯದ ಸ್ಥಿತಿಯನ್ನು ಎದುರಿಸುವಂತಾಗಿದೆ.
ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಗುತ್ತಿಗೆದಾರ ಕಂಪನಿ ಅಮ್ಮಾಪುರ ಕನ್ಸಟ್ರಕ್ಷನ್ ನ ಅಸಮರ್ಪಕ ಮತ್ತು ವಿಳಂಬ ನೀತಿಯ ಕಾರಣದಿಂದ ಈ ಸಮಸ್ಯೆ ಉಂಟಾಗಿದೆ. 2 ವರ್ಷಕ್ಕೆ ಮುಗಿಯಬೇಕಾಗಿದ್ದ ಕಾಮಗಾರಿ 4 ವರ್ಷವಾದರೂ ಪ್ರಾರಂಭವೇ ಆಗಿಲ್ಲ, ಕಾಮಗಾರಿಯಂತೂ ಇಲ್ಲ ಜತೆಯಲ್ಲಿ ಕನಿಷ್ಟ ನಿರ್ವಹಣೆಯನ್ನೂ ಮಾಡುತ್ತಿಲ್ಲ. ಆಭಾಗದ ಜನರ ಜೀವ ಅಪಾಯದಲ್ಲಿದೆ. ಈ ಮಾರ್ಗದ ಶಿರಸಿಯಿಂದ ಎಕ್ಕಂಬಿ -ಬಿಸ್ಲಕೊಪ್ಪ ಮಾರ್ಗದ ತುಂಬಾ ಸಾಕಷ್ಟು ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರು ನಿತ್ಯವೂ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ.
ಈ ಕಾರಣ ಈ ಭಾಗದ ಜನರು ಆಕ್ರೋಶಗೊಂಡಿದ್ದಾರೆ. ಇನ್ನೂ 5 ದಿನದಲ್ಲಿ ರಸ್ತೆಯನ್ನು ಗುಂಡಿ ಮುಚ್ಚಿ ರಿಪೇರಿ ಮಾಡದೇ ಹೋದರೆ ಜನರು ಕಾನೂನು ಕೈಗೆತ್ತಿಗೊಳ್ಳುವ ಸಾಧ್ಯತೆ ಇದೆ ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ. ಇದರಿಂದಗಾಗಿ ಲಾ ಅಂಡ್ ಆರ್ಡರ್ ಸಮಸ್ಯೆ ಆಗಬಹುದಾಗಿದ್ದು, ಗುಂಡಿ ಮುಚ್ಚದ ಕಂಪನಿ ವಿರುದ್ಧ ಅದರ ಇಂಚಾರ್ಜ್ ಮ್ಯಾನೇಜರ್ ರಾಘವೇಂದ್ರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಮತ್ತು ಅವರನ್ನು ಕರೆದು ಠಾಣೆಯಲ್ಲಿ ವಿಚಾರಿಸಬೇಕು. ಹಾಗೂ NHAI ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡಬೇಕೆಂದು ಸ್ಥಳೀಯರಾದ ಹಾಲಪ್ಪ ಜಕ್ಲಣ್ಣವರ, ಅನಂತಮೂರ್ತಿ ಹೆಗಡೆ, V. M. ಭಟ್, G. S. ಹೆಗಡೆ, ನಾಗರಾಜ್ ಮನವಿ ಮಾಡಿದ್ದಾರೆ.