ಕಾರವಾರದಲ್ಲಿ ತಪ್ಪಿದ ಭಾರಿ ಅನಾಹುತ: ಬೋಟ್‌ನಲ್ಲಿ ಸಿಲಿಂಡರ್‌ಗೆ ಬೆಂಕಿ!
ಕಾರವಾರದಲ್ಲಿ ತಪ್ಪಿದ ಭಾರಿ ಅನಾಹುತ: ಬೋಟ್‌ನಲ್ಲಿ ಸಿಲಿಂಡರ್‌ಗೆ ಬೆಂಕಿ!

ಕಾರವಾರ: ಕಾರವಾರದ ಬೈತಖೋಲ ಬಂದರಿನಲ್ಲಿ ಭಾರಿ ಅನಾಹುತವೊಂದು ತಡೆಯಲ್ಪಟ್ಟಿದೆ. ಇಂದಿನಿಂದ (ಆಗಸ್ಟ್ 1) ಮೀನುಗಾರಿಕೆ ಪ್ರಾರಂಭವಾದ ಹಿನ್ನಲೆಯಲ್ಲಿ ಹಲವು ಬೋಟುಗಳು ಕಡಲಿಗೆ ಇಳಿದಿದ್ದವು. ಈ ವೇಳೆ ಮೀನುಗಾರಿಕೆಗೆ ತೆರಳಿ ವಾಪಸ್ಸಾದ ಸಂದರ್ಭದಲ್ಲಿ ಬೋಟ್‌ನಲ್ಲಿ ಅಡುಗೆ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಬೋಟಿನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಭಯಭೀತರಾದ ಮೀನುಗಾರರು ತಕ್ಷಣ ಸಿಲಿಂಡರ್‌ನ್ನು ಸಮುದ್ರಕ್ಕೆ ಎಸೆದರು. ಆದರೆ ಸಮುದ್ರದ ನೀರಿಗೂ ಬೆಂಕಿಯ ಪ್ರಬಲತೆಯನ್ನು ತಡೆಯಲಾಗಲಿಲ್ಲ. ನೀರಿನಲ್ಲಿರುವಾಗಲೂ ಸಿಲಿಂಡರ್ ಬೆಂಕಿಯಿಂದ ಉರಿದದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಯಿತು.
ಘಟನೆ ವೇಳೆ ಸ್ಥಳದಲ್ಲಿ ನೂರಾರು ಮೀನುಗಾರರು ಜಮಾವಣೆಗೊಂಡಿದ್ದರು. ಬೆಂಕಿ ಸಿಲಿಂಡರ್ ಸ್ಪೋಟಗೊಂಡಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ತಕ್ಷಣ ಸ್ಥಳೀಯರು ಧೈರ್ಯದಿಂದ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಕೈಹಾಕಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕೆ ದೌಡಾಯಿಸಿದರು.
ಘಟನೆಯಲ್ಲಿ ಯಾರಿಗೂ ಗಾಯಗಳಾಗದೇ ಅನಾಹುತ ತಪ್ಪಿದ್ದು ಮೀನುಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಮುಂದೆ ಈ ರೀತಿಯ ಅವಘಡಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದೆ.