ದೇವರಿಗೆ ಇಟ್ಟಿದ್ದ ದೀಪದಿಂದ ಮನೆಗೆ ಬೆಂಕಿ: ಮನೆಯಲ್ಲಿದ್ದವರು ಪಾರು
ದೇವರಿಗೆ ಇಟ್ಟಿದ್ದ ದೀಪದಿಂದ ಮನೆಗೆ ಬೆಂಕಿ: ಮನೆಯಲ್ಲಿದ್ದವರು ಪಾರು

ಕಾರವಾರ: ನಗರದ ನಂದನಗದ್ದಾದಲ್ಲಿ ಶನಿವಾರ ಸಂಜೆ ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಮನಗೆಗೆ ಬೆಂಕಿ ತಗುಲಿದ್ದು, ಸಂಪೂರ್ಣ ಮನೆ ಬೆಂಕಿಗೆ ಆಹುತಿಯಾಗಿದೆ.
ಇಲ್ಲಿನ ಶಾಂತಾರಾಮ ದತ್ತ ದೇಸಾಯಿ ಎನ್ನುವವರ ಮನೆಗೆ ಬೆಂಕಿ ತಗುಲಿದೆ. ದೇವರಿಗೆ ದೀಪ ಹಚ್ಚಿ ಅಂಗಡಿ ಹೋಗಿದ್ದ ವೇಳೆ ಬೆಂಕಿಯು ಪಸರಿಸಿ ದೊಡ್ಡದಾಗಿದೆ. ಈ ವೇಳೆ ಮನೆಯಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಂಚಿನ ಮನೆಯಾದ ಕಾರಣ ಮರದ ಕಟ್ಟಿಗಗಳಿಗೆ ಬೆಂಕಿ ತಾಗಿದ್ದು ಕ್ಷಣ ಮಾತ್ರದಲ್ಲಿ ಬೆಂಕಿಯ ವ್ಯಾಪ್ತಿಯು ಹೆಚ್ಚಿದೆ. ಬೆಂಕಿಯನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯಿಂದ ಕೊನೆಗೂ ಬೆಂಕಿ ನಂದಿಸಲಾಗಿದೆ. ಘಟನೆಯಿಂದ ಮನೆಯ ಪೀಠೊಪಕರಣಗಳು, ಬಟ್ಟೆ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ, ರಾಜೇಶ ರಾಣೆ, ಸುನೀಲ ಕುಮಾರ, ಪ್ರವೀಣ ನಾಯ್ಕ, ವಸಂತ ದೇವಾಡಿಗ, ಸುನೀಲ ನಾಯ್ಕ, ಟೋನಿ ಬಾರ್ಬೋಸಾ ಹಾಗೂ ಅರುಣ ಇದ್ದರು.