ಅದಿರು ಪ್ರಕರಣದಲ್ಲಿ ಶಾಸಕನ ಬಂಧನ ಸರ್ಕಾರಕ್ಕೆ ಮುಜಗರ ಇಲ್ಲ; ಎಚ್ ಕೆ ಪಾಟೀಲ್
ಅದಿರು ಪ್ರಕರಣದಲ್ಲಿ ಶಾಸಕನ ಬಂಧನ ಸರ್ಕಾರಕ್ಕೆ ಮುಜಗರ ಇಲ್ಲ; ಎಚ್ ಕೆ ಪಾಟೀಲ್
ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕನ ಬಂಧನ ಆಗಿರುವುದು ಸರ್ಕಾರಕ್ಕೆ ಮುಜಗರವೇನು ಇಲ್ಲ. ಅಪರಾಧಿಗಳಿಗೆ ಶಿಕ್ಷೆ ಆಗಿರುವುದು ಸಿಎಂ ಪಾದಯಾತ್ರೆಯ ಫಲ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು ವಿಧಾನಸೌಧದಲ್ಲಿ ಮಾತನಾಡಿದ ಅವರು,
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ನೀಡಿರುವುದು ಸಿದ್ದರಾಮಯ್ಯ ಪಾದಯಾತ್ರೆಗೆ ಸಿಕ್ಕಿರುವ ಪ್ರತಿಫಲವಾಗಿದೆ. ಬಿಜೆಪಿ ಅಧಿಕಾರದಲ್ಲಿರುವಾಗ ದೇಶದಲ್ಲಿಯೇ ದೊಡ್ಡ ಪ್ರಮಾಣದ ಲೂಟಿ ಪ್ರಕರಣ ಇದಾಗಿತ್ತು. ಲಕ್ಷ ಲಕ್ಷ ಬೆಲೆ ಬಾಳುವ ಅದಿರು ಬಿಜೆಪಿ ಅವಧಿಯಲ್ಲಿ ಕಳ್ಳತನ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದರ ಜೊತೆಗೆ , 44 ಕೋಟಿ ರೂ. ದಂಡ ಹೇರಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿರುವಾಗ ಆಗಿರುವ ಈ ಪ್ರಕರಣವನ್ನು ಮರೆಮಾಚುವುದಕ್ಕೆ ಈಗ ಬಿಜೆಪಿಯವರೇ ಮುಂದೆ ಬಂದು ಮಾತನಾಡುತ್ತಿದ್ದಾರೆ. ಅದಿರು ಕಳುವು ಮಾಡುವುದಕ್ಕೆ ಅಂದಿನ ಸರ್ಕಾರದ ಕೈವಾಡ ಇದ್ದಿತ್ತು. 6 ಲಕ್ಷ ಮೆಟ್ರಿಕ್ ಟನ್ ಖನಿಜ ರಫ್ತಾಗಿತ್ತು. ಆ ಸಂದರ್ಭದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಗೆ ಅವರು ಅಕ್ರಮ ಬಯಲಿಗೆಳೆದು ವರದಿ ನೀಡಿದ್ದರು. ಅವರ ವರದಿಗೆ ಈಗ ತಾರ್ಕಿಕ ಅಂತ್ಯ ಬರುವುದಕ್ಕೆ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ಅದಿರು ಅಕ್ರಮದ ವಿರುದ್ಧ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದರು. ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಕೋರ್ಟ್ ನಿರ್ಣಯ ನೀಡಿದೆ. ಕಳ್ಳರು ಎಲ್ಲೇ ಇರಲಿ ಅವರಿಗೆ ಶಿಕ್ಷೆ ಕೊಡುವುದು ಕೋರ್ಟ್ ಕೆಲಸವಾಗಿದೆ. ಈ ಅಕ್ರಮವನ್ನು ಮಟ್ಟ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದಕ್ಕೆ ಯಶಸ್ಸು ಸಿಕ್ಕಿದೆ. ಕಾಂಗ್ರೆಸ್ ಶಾಸಕ ಬಂಧನ ಆಗಿರುವುದು ಸರ್ಕಾರಕ್ಕೆ ಮುಜುಗರವೇನು ಇಲ್ಲ ಎಂದು ಹೇಳಿದರು.