ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಬಾಲಕ ಬಾವಿಗೆ ಬಿದ್ದು ಸಾವು
ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಬಾಲಕ ಬಾವಿಗೆ ಬಿದ್ದು ಸಾವು

ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಬಾಲಕ ಬಾವಿಗೆ ಬಿದ್ದು ಸಾವು
ಭಟ್ಕಳ: ಶಾಲೆಯಿಂದ ಆಯೋಜಿಸಲಾಗಿದ್ದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ಬಾವಿಗೆ ಬಿದ್ದು ಮೃತಪಟ್ಟ ಧಾರುಣ ಘಟನೆ ಬುಧವಾರ ಸಂಜೆ 7:30ರ ಸುಮಾರಿಗೆ ಭಟ್ಕಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಗಾಣದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ(14) ಮೃತ ದುರ್ದೈವಿ. ಭಟ್ಕಳದ ತಾಲೂಕು ಪಂಚಾಯತ ಎದುರಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆಗೆಂದು ಹೋದಾಗ ತೆರೆದ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಗಾಣದಾಳ ಶಾಲೆಯ 100 ವಿದ್ಯಾರ್ಥಿಗಳು ಜೋಗ ಫಾಲ್ಸ್, ಕೊಲ್ಲೂರು ಮತ್ತಿತರ ಕಡೆ ಪ್ರವಾಸಕ್ಕೆಂದು ಎರಡು ಬಸ್ಸುಗಳಲ್ಲಿ ಬಂದಿದ್ದರು. ಇವರೊಂದಿಗೆ 13 ಜನ ಶಿಕ್ಷಕರಿದ್ದರು. ನಿನ್ನೆ ರಾತ್ರಿ ಗಾಣದಾಳದಿಂದ ಹೊರಟಿದ್ದ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಜೋಗ ಜಲಪಾತ ವೀಕ್ಷಿಸಿದ್ದರು. ಅಲ್ಲಿಂದ ಕೊಲ್ಲೂರಿಗೆ ತೆರಳಲು ಅರಬೈಲ್ ಘಟ್ಟದ ಮೂಲಕ ಹೊನ್ನಾವರ ಮಾರ್ಗವಾಗಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಭಟ್ಕಳದಲ್ಲಿ ಗುಳಿಗೆ ಖರೀದಿಗಾಗಿ ನಿಲ್ಲಿಸಲಾಗಿತ್ತು. ತಾಲೂಕು ಪಂಚಾಯತ್ ಕಚೇರಿ ಎದುರಿನ ಔಷಧಿ ಅಂಗಡಿಯಲ್ಲಿ ಗುಳಿಗೆ ಖರೀದಿಸಲು ವಾಹನ ನಿಲ್ಲಿಸಲಾಗಿತ್ತು.
ಈ ಸಂದರ್ಭ ಕೆಲವು ಬಾಲಕರು ಮೂತ್ರ ವಿಸರ್ಜನೆಗೆಂದು ಔಷಧಿ ಅಂಗಡಿಯ ಹಿಂದಿರುವ ಖುಲ್ಲಾ ಜಾಗಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಬಾಲಕ ಬಿದ್ದಿದ್ದಾನೆ. ತಕ್ಷಣ ಜೊತೆಗಿದ್ದ ಬಾಲಕರು ಕೂಗಿದ್ದರಿಂದ ಸ್ಥಳೀಯರು ದೌಡಾಯಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಅಸ್ವಸ್ಥಗೊಂಡ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸುದ್ದಿ ತಿಳಿದು ತಹಶೀಲ್ದಾರ ನಾಗೇಂದ್ರ ಶೆಟ್ಟಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳದ ಪ್ರವಾಸಿ ಮಂದಿರದಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.