*ಆಟೋ ಗುದ್ದಿ ಬೈಕ್ ಸವಾರ ಸಾವನ್ನಪ್ಪಿದ್ದ ಪ್ರಕರಣ: 1 ವರ್ಷ ಜೈಲುವಾಸದ ತೀರ್ಪು ಎತ್ತಿಹಿಡಿದ ಜಿಲ್ಲಾ ನ್ಯಾಯಾಲಯ*
ಶಿರಸಿ: ನಿರ್ಲಕ್ಷ್ಯದ ಚಾಲನೆಯಿಂದ ಬೈಕ್‌ಗೆ ಗುದ್ದಿ ಸವಾರನೋರ್ವನ ಸಾವಿಗೆ ಕಾರಣನಾಗಿದ್ದ ಆರೋಪಿ ಆಟೋ ಚಾಲಕ ಪ್ರಸನ್ನ ಈಶ್ವರ ಪಟಗಾರ ಎಂಬುವವನಿಗೆ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 1 ಸಾವಿರ ದಂಡ ವಿಧಿಸಿದ ತೀರ್ಪನ್ನು ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎತ್ತಿ ಹಿಡಿದಿದೆ.
ಪ್ರಕರಣ ಸಂಬಂಧ ಕೆಳಹಂತದ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಆಟೋ ಚಾಲಕ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ ಅರ್ಜಿ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಅಭಿಯೋಜಕರಾದ ರಾಜೇಶ ಎಂ ಮಳಗಿಕರ್ ತಮ್ಮ ವಾದವನ್ನು ಮಂಡಿಸಿದ್ದರು.
ಆರೋಪಿಯು ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಗುದ್ದಿ ಗಾಯಗೊಳಿಸಿದ್ದನು. ಬಳಿಕ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಆರೋಪಿಗೆ ಶಿಕ್ಷೆ ವಿಧಿಸಲಾಗಿತ್ತು.