ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ: ಭೂಕಂಪದ ಆತಂಕ!
ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ತಾಲ್ಲೂಕುಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಆತಂಕಗೊಂಡ ಘಟನೆ ನಡೆದಿದೆ. ಮಧ್ಯಾಹ್ನದ ವೇಳೆಗೆ ಏಕಾಏಕಿ ಭೂಮಿ ಕಂಪಿಸಿದಂತಾಗಿದ್ದು, ಹಲವರು ಭೂಕಂಪ ಇರಬಹುದೆಂದು ಮನೆಯಿಂದ ಹೊರಬಂದಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಮನೆಯಲ್ಲಿದ್ದವರಿಗೆ ಏಕಾಏಕಿ ಮನೆಯ ವಸ್ತುಗಳು ಕಂಪಿಸಿದ ಅನುಭವವಾಗಿದೆ. ಹಲವರಿಗೆ ಕುಳಿತ ಖುರ್ಚಿ, ಸೋಫಾ ಅಲುಗಾಡಿದ ಅನುಭವವಾಗಿದ್ದು, ಭೂಕಂಪ ಉಂಟಾಗಿರಬಹುದೆಂದು ಮನೆಯಿಂದ ಹೊರಗೆ ಬಂದಿದ್ದಾರೆ. ಅಲ್ಲದೇ ಅಕ್ಕಪಕ್ಕದವರೂ ಸಹ ತಮಗೂ ಅದೇ ರೀತಿ ಅನುಭವ ಆಗಿದ್ದನ್ನು ಹೇಳಿಕೊಂಡಿದ್ದು ಜನರು ಕಂಗಾಲಾಗಿದ್ದಾರೆ.
ಶಿರಸಿ ತಾಲೂಕಿನ ಸಂಪಖಂಡ, ಗೋಳಿಮಕ್ಕಿ, ಮತ್ತಿಘಟ್ಟಾ ಸೇರಿದಂತೆ ಕೆಲವು ಗ್ರಾಮಗಳು ಹಾಗೂ ಸಿದ್ದಾಪುರ ತಾಲ್ಲೂಕಿನ ಹೆಗ್ಗರಣಿ, ಹೇರೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಕೆಲವೆಡೆ ತಗಡಿನ ಮನೆಯಲ್ಲಿದ್ದವರಿಗೆ ಭೂಮಿ ಕಂಪಿಸಿದ ಸ್ಪಷ್ಟ ಅನುಭವವಾಗಿದ್ದು, ಕೆಲಕಾಲ ಮನೆಯೊಳಗೆ ಹೋಗದೇ ಅಪಾಯವಾಗುವ ಆತಂಕದಲ್ಲಿ ಹೊರಗೆ ಕಾಲಕಳೆದಿದ್ದಾರೆ. ಆದರೆ ಇದುವರೆಗೂ ಅಧಿಕೃತವಾಗಿ ಯಾವುದೇ ಇಲಾಖೆಯಿಂದ ಭೂಕಂಪನದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.