ಉತ್ತರಕನ್ನಡ ಕರಾವಳಿಯಲ್ಲೂ ಫೆಂಗಲ್ ಚಂಡಮಾರುತ ಅಬ್ಬರ: ಮೀನುಗಾರಿಕೆ ಬಂದ್!
ಕಾರವಾರ: ಫೆಂಗಲ್ ಚಂಡಮಾರುತದ ಅಬ್ಬರ ಉತ್ತರಕನ್ನಡ ಜಿಲ್ಲೆಗೂ ತಟ್ಟಿದೆ. ಪರಿಣಾಮ ಜಿಲ್ಲೆಯ ಕರಾವಳಿ ಸೇರಿದಂತೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲೂ ಸಾಧಾರಣದಿಂದ ತುಂತುರು ಮಳೆ ಸುರಿಯುತ್ತಿದೆ. ಅರಬ್ಬೀ ಸಮುದ್ರದಲ್ಲಿ ವಾಯಭಾರ ಕುಸಿತವಾದ ಹಿನ್ನಲೆ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.
ಕರಾವಳಿಯಲ್ಲಿ ಎರಡು ದಿನಗಳ ಕಾಲ ಮಳೆ ಸುರಿಯುವ ಮುನ್ಸೂಚನೆ ನೀಡಿದ್ದು ಉಡುಪಿ, ಮಂಗಳೂರು ಭಾಗದಲ್ಲಿ ನಿನ್ನೆ ಸಂಜೆಯಿಂದಲೇ ಮಳೆಯ ಅಬ್ಬರ ಆರಂಭವಾಗಿದ್ದರೆ ಕಾರವಾರ ಭಾಗದಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಫೆಂಗಲ್ ಚಂಡಮಾರುತ ಹಿನ್ನಲೆ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಕಾರವಾರದ ಬೈತಖೋಲ ಬಂದರಿನಲ್ಲಿ ಕೇರಳ, ತಮಿಳುನಾಡು ಭಾಗದ ಸೇರಿದಂತೆ 500ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳು ಲಂಗರು ಹಾಕಿ ನಿಂತಿವೆ. ಹವಾಮಾನ ವೈಪರೀತ್ಯ ಹಿನ್ನಲೆ ಮೀನುಗಾರರೇ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದು, ನಾಳೆಯೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.