ದರೋಡೆ ಪ್ರಕರಣ: ತಲ್ಲತ್ ಗ್ಯಾಂಗ್ ಸದಸ್ಯರ ಮೇಲೆ ಪೊಲೀಸರಿಂದ ಗುಂಡೇಟು, ಬಂಧನ
ದರೋಡೆ ಪ್ರಕರಣ: ತಲ್ಲತ್ ಗ್ಯಾಂಗ್ ಸದಸ್ಯರ ಮೇಲೆ ಪೊಲೀಸರಿಂದ ಗುಂಡೇಟು, ಬಂಧನ

ಕಾರವಾರ: ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರನ್ನು ಅಡ್ಡಗಟ್ಟಿ 1.75 ಕೋಟಿ ಹಣ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಅವರನ್ನು ಬಂಧಿಸಿ ಕರೆತರುವ ವೇಳೆ ಹಳಿಯಾಳದ ಭಾಗವತಿ ಬಳಿ ಪೊಲೀಸರ ಮೇಲೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಪ್ರಮುಖ ಆರೋಪಿಗಳ ಬಂಧನ: ಪೊಲೀಸರ ಕ್ರೀಪ್ರ ಕಾರ್ಯಾಚರಣೆಯಡಿ, ಬೆಳಗಾವಿಯ ವಂಟಮೂರಿ ಘಾಟ್ ಬಳಿ ಮಂಗಳೂರಿನ ಬಜಾಲ್ ನಂತೂರು ಮೂಲದ ತಲ್ಲತ್ ತಂಗಲ್(41), ಕಣ್ಣೂರು ಮೂಲದ ಎಂ.ಬಿ ನೌಪಾಲಾ(33) ಹಾಗೂ ಮೊಹಮ್ಮದ್ ಸಾಹಿಲ್ ಇಬ್ರಾಹಿಂ ಬಂಧಿತ ಆರೋಪಿಗಳಾಗಿದ್ದಾರೆ.
ಈ ಮೂವರೂ ರೌಡಿಶೀಟರ್‌ಗಳಾಗಿದ್ದು, ರಾಜ್ಯಾದ್ಯಂತ ಹಲವಾರು ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ಇವರನ್ನು ಕ್ರೈಮ್ ಬ್ರಾಂಚ್ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿಗಳನ್ನು ಕೊಂಡೊಯ್ಯುವಾಗ, ಹಳಿಯಾಳ ತಟ್ಟಿಗೇರಾ ಕ್ರಾಸ್ ಬಳಿ ಪೊಲೀಸ್ ವಾಹನ ನಿಲ್ಲಿಸಿದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಕಲ್ಲುಗಳಿಂದ ಹಲ್ಲೆ ಮಾಡಿದರು. ನಂತರ ಗಾಜಿನ ಬಾಟಲಿ ಒಡೆದು ಪೊಲೀಸ್ ಅಧಿಕಾರಿಗಳಾದ ಪಿ.ಎಸ್.ಐ ಉದ್ದಪ್ಪ ಧರೇಪ್ಪ ಮತ್ತು ಪರಶುರಾಮ ಮಿರ್ಜಿಗಿರವರ ಮೇಲೆ ದಾಳಿ ಮಾಡಿದರು. ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ನಂತರ, ಆರೋಪಿಗಳು ತಪ್ಪಿಸಿಕೊಳ್ಳಲು ಓಡಿದರು.
ಈ ಸಂದರ್ಭದಲ್ಲಿ, ಪೊಲೀಸರು ತಲ್ಲತ್ ತಂಗಲ್ ಮತ್ತು ಎಂ.ಬಿ ನೌಪಲ್‌ರ ಎಡಗಾಲಿನ ಮಂಡಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಗಳನ್ನು ಹುಬ್ಬಳ್ಳಿಯ KIMS ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸ್ ಅಧಿಕಾರಿಗಳಾದ ಬಸವರಾಜ ಹಗರಿ ಮತ್ತು ಕೋಟೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಗಾಯಗೊಂಡಿದ್ದು, ಅವರಿಗೆ ಹಳಿಯಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿ, ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಮೇಲೆ, ಪೊಲೀಸರ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ ಸೇರಿದಂತೆ IPC ಮತ್ತು BNS ಸೆಕ್ಷನ್‌ಗಳಡಿ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಶ್ಲಾಘನೆ ವ್ಯಕ್ತಪಡಿಸಿದ್ದು, ಬಹುಮಾನ ಘೋಷಿಸಿದ್ದಾರೆ.