ಬಂದರು ನಿರ್ಮಾಣದಿಂದ ಕಡಲಕೊರತೆ ಉಂಟಾಗದಂತೆ ಶಾಶ್ವತ ಪರಿಹಾರಕ್ಕೆ ಯತ್ನ: ಪ್ರಸಾದ
ಬಂದರು ನಿರ್ಮಾಣದಿಂದ ಕಡಲಕೊರತೆ ಉಂಟಾಗದಂತೆ ಶಾಶ್ವತ ಪರಿಹಾರಕ್ಕೆ ಯತ್ನ: ಪ್ರಸಾದ

ಕಾರವಾರ: ಕೇಣಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದಿಂದ ಕಡಲಕೊರೆತ ಅಪಾಯ ಉಂಟಾಗದಂತೆ ವೈಜ್ಞಾನಿಕ ರೀತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜೆಎಸ್‌ಡಬ್ಲೂ ಕೇಣಿ ಪೋರ್ಟ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಸಾದ ತಿಳಿಸಿದರು.
ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಣಿ ವಾಣಿಜ್ಯ ಬಂದರು ಸಂಪೂರ್ಣವಾಗಿ ಸಮುದ್ರ ಪ್ರದೇಶದಲ್ಲೇ ನಿರ್ಮಾಣವಾಗಲಿದೆ. ಈಗಾಗಲೇ ಬಂದರು ನಿರ್ಮಾಣದ ಸಾಧ್ಯತೆಗಳ ಕುರಿತು ವೈಜ್ಞಾನಿಕ ಸಮೀಕ್ಷೆ ಕಾರ್ಯವೂ ನಡೆಯುತ್ತಿದ್ದು, ಬಂದರಿಗೆ ಬ್ರೇಕ್ ವಾಟರ್ ನಿರ್ಮಾಣದಿಂದ ಕರಾವಳಿಯ ಇತರೆ ಕಡೆಗಳಲ್ಲಿ ಆಗಬಹುದಾದ ಪರಿಣಾಮ ಹಾಗೂ ಕಡಲಕೊರೆತ ತಡೆಗೆ ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಪರಿಹಾರ ಒದಗಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಸಾಧಕ ಬಾಧಕಗಳ ಕುರಿತು ಅಧ್ಯಯನ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.
ಇನ್ನು ಖಾಸಗಿ ವಾಣಿಜ್ಯ ಬಂದರು ನಿರ್ಮಾಣದಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದ್ದು, ಮಹಿಳೆಯರಿಗೂ ಸಹ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪೂರಕ ತರಬೇತಿಯನ್ನು ಒದಗಿಸಲಾಗುವುದು. ಅಲ್ಲದೇ ಬಂದರು ನಿರ್ಮಾಣದಿಂದ ಮೀನುಗಾರಿಕೆಗೆ ಯಾವುದೇ ಅಡ್ಡಿ ಇಲ್ಲವಾಗಿದ್ದು, ಮೀನುಗಾರರು ಬಂದರು ವ್ಯಾಪ್ತಿಯಿಂದ ಮೀನುಗಾರಿಕೆಗೆ ತೆರಳಲು ಯಾವುದೇ ತೊಂದರೆ ಇರುವುದಿಲ್ಲ, ಸ್ಥಳೀಯರ ಸಹಕಾರದೊಂದಿಗೆ ಬಂದರು ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಬಳಿಕ ಮಾತನಾಡಿದ ಜೆಎಸ್‌ಡಬ್ಲೂನ ಪಿಆರ್‌ಓ ಡಾ. ರೇಷ್ಮಾ ಉಳ್ಳಾಲ ಅವರು, ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಮೀನುಗಾರರ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ಖಾಸಗಿ ಬಂದರು ಯೋಜನೆ ಕುರಿತು ತಿಳಿಸಿ ಸಹಕಾರ ಕೋರಲಾಗಿದೆ. ಈ ಬಗ್ಗೆ ಮುಖಂಡರುಗಳಿಂದಲೂ ಸ್ಪಂದನೆ ದೊರಕಿದ್ದು, ಮುಂದಿನ ದಿನಗಳಲ್ಲಿ ಮೀನುಗಾರರೊಂದಿಗೂ ಸಹ ಮಾತುಕತೆ ನಡೆಸಲಾಗುವುದು ಎಂದರು.