ಅಣ್ಣನ ಹೆಸರಿನಲ್ಲಿ ಪದವಿ ಓದಿ ಸಿಕ್ಕಿಬಿದ್ದ ತಮ್ಮ: ಪೊಲೀಸ್ ವಶಕ್ಕೆ
ಅಣ್ಣನ ಹೆಸರಿನಲ್ಲಿ ಪದವಿ ಓದಿ ಸಿಕ್ಕಿಬಿದ್ದ ತಮ್ಮ: ಪೊಲೀಸ್ ವಶಕ್ಕೆ

ಭಟ್ಕಳ: ಭಟ್ಕಳದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷಗಳಿಂದ ಅಣ್ಣನ ಹೆಸರಿನಲ್ಲಿ ಪದವಿ ಕಾಲೇಜಿಗೆ ಹೋಗುತ್ತಿದ್ದ ತಮ್ಮ, ಇದೀಗ ಪರೀಕ್ಷೆಯ ಸಂದರ್ಭದಲ್ಲಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ.
ಅಣ್ಣನ ಹೆಸರಿನಲ್ಲಿ ಪದವಿ ಓದುತ್ತಿದ್ದ ಯುವಕನ ಹೆಸರು ರಂಜಿತ್ ಕುಮಾರ್. ಈತನು ತನ್ನ ಅಣ್ಣ ರೋಹಿತ್ ಕುಮಾರ್ ಹೆಸರು ಮತ್ತು ದಾಖಲೆಗಳನ್ನು ಬಳಸಿ, 2022 ರಲ್ಲಿ ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಾಗಿದ್ದ. ರೋಹಿತ್ ಭಟ್ಕಳದಲ್ಲೇ ಖಾಸಗಿ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.
ಈ ವರ್ಷ ಅಂತಿಮ ವರ್ಷದ ಪದವಿ ಪರೀಕ್ಷೆ ವೇಳೆ ಘಟನೆ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ವಿಚಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ, ದಾಖಲೆ ಪರಿಶೀಲನೆಯ ವೇಳೆ ಭಿನ್ನತೆ ಕಂಡುಬಂದಿದೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲ ನಾಗೇಶ್ ಗಣಪತಿ ಶೆಟ್ಟಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ, ಪ್ರಕರಣದ ತನಿಖೆ ಆರಂಭಗೊಂಡಿದೆ.
ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅಣ್ಣನ ಹೆಸರು ಬಳಸಿ ವಿದ್ಯಾಭ್ಯಾಸ ಮಾಡಿರುವ ಈ ಕೃತ್ಯವು ಈಗ ವಿದ್ಯಾ ಸಂಸ್ಥೆಗಳಲ್ಲಿ ದಾಖಲೆಗಳ ಪರಿಶೀಲನೆಯ ಮಹತ್ವವನ್ನು ಮತ್ತೊಮ್ಮೆ ಎಚ್ಚರಿಸಿದೆ.