ಡಾ. ಕುಡ್ತಳಕರ್ ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಯ ತೋರಿಲ್ಲ: ಕ್ರಿಮ್ಸ್ ಆಡಳಿತ ಮಂಡಳಿ ಸ್ಪಷ್ಟನೆ
ಡಾ. ಕುಡ್ತಳಕರ್ ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಯ ತೋರಿಲ್ಲ: ಕ್ರಿಮ್ಸ್ ಆಡಳಿತ ಮಂಡಳಿ ಸ್ಪಷ್ಟನೆ

ಕಾರವಾರ: ಲೋಕಾಯುಕ್ತ ವಶದಲ್ಲಿರುವ ಡಾ. ಶಿವಾನಂದ ಕುಡ್ತಳಕರ್ ಆರೋಗ್ಯ ಹದಗೆಟ್ಟರೂ ಜಿಲ್ಲಾ ಆಸ್ಪತ್ರೆಯವರು ಸೂಕ್ತ ಚಿಕಿತ್ಸೆ ಒದಗಿಸುತ್ತಿಲ್ಲ ಎಂದು ಪುತ್ರ ಡಾ. ಕಿಶನ್ ಮಾಡಿದ್ದರು. ಈ ಆರೋಪಕ್ಕೆ ಕ್ರಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ತಿಳಿಸಿದೆ.
ಜು.10 ರಿಂದ ಡಾ. ಶಿವಾನಂದ ಕುಡ್ತಾರಕರರು ಲೋಕಾಯುಕ್ತ ಪ್ರಕರಣದ ಕುರಿತಂತೆ ನ್ಯಾಯಾಂಗ ಬಂಧನದಲ್ಲಿದ್ದು, ಈ ಅವಧಿಯಲ್ಲಿ ಅವರಿಗೆ ಎದೆ ನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕ್ರಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ, ಜು.12 ರಂದು ಅವರು ಸೊಂಟದ ನೋವಿನಿಗಾಗಿ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆಯ ಸಂದರ್ಭದಲ್ಲಿ, ಹೃದಯ ತಜ್ಞರಾದ ಡಾ. ಅಮಿತ್ ಕಾಮತ್ ಹಾಗೂ ಡಾ. ರಾಜು ತಳವಾರ, ಎದೆಗೂಡು ತಜ್ಞರಾದ ಡಾ. ಶ್ರೀನಿವಾಸರವರು ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಒದಗಿಸಿದ್ದಾರೆ. ಸೊಂಟದ ನೋವಿನ ಸಂಬಂಧವಾಗಿ ಆರ್ಥೋಪಿಡಿಕ್ ತಜ್ಞ ಡಾ. ಮಹಿಧರ ಅವರು ಸಹ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಡಾ. ಶಿವಾನಂದ ಕುಡ್ತಾರಕರರು ಕ್ರಿಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ವೈದ್ಯಕೀಯ ನೀತಿಸಂಹಿತೆಗೆ ಅನುಗುಣವಾಗಿ ಎಲ್ಲ ವಿಧದ ಚಿಕಿತ್ಸೆಯನ್ನೂ ಸಮರ್ಪಕವಾಗಿ ನೀಡಲಾಗುತ್ತಿದೆ. ಈ ಸಂಬಂಧ ಆಸ್ಪತ್ರೆಯ ನಿರ್ದೇಶಕರಾಗಲಿ, ಇತರ ಮೇಲಾಧಿಕಾರಿಗಳಾಗಲಿ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲ. ವೈದ್ಯಕೀಯ ಕ್ಷೇತ್ರದ ಗೌರವ ಹಾಗೂ ಸಂಸ್ಥೆಯ ಮಾನ್ಯತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ರೀತಿಯ ನಿರ್ಲಕ್ಷ್ಯತೆ ಅಥವಾ ತಾತ್ಸಾರ ಮಾಡಿಲ್ಲ ಎಂಬುದಾಗಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ಆಸ್ಪತ್ರೆಯ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಅಥವಾ ಆಡಳಿತ ಮಂಡಳಿ ಯಾವುದೇ ರೀತಿಯ ಒತ್ತಡ ತರುವಂತಿಲ್ಲ. ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ತಜ್ಞರು ಸಂಪೂರ್ಣವಾಗಿ ಸ್ವತಂತ್ರರಾಗಿದ್ದಾರೆ. ಡಾ. ಕುಡ್ತಾರಕರರವರ ದಿನಂಪ್ರತಿ ಆರೋಗ್ಯ ಸ್ಥಿತಿಯ ಬಗ್ಗೆ ನಿಯಮಿತವಾಗಿ ತಪಾಸಣೆ ನಡೆಸಿ ವರದಿ ಸಲ್ಲಿಸಲು ವೈದ್ಯರು ಹಾಗೂ ವೈದ್ಯಕೀಯ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.