ಮಳೆಗೆ ಹಳ್ಳದಂತಾದ ರಸ್ತೆ: ಅನಾರೋಗ್ಯಪೀಡಿತ ವೃದ್ಧೆ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು
ಮಳೆಗೆ ಹಳ್ಳದಂತಾದ ರಸ್ತೆ: ಅನಾರೋಗ್ಯಪೀಡಿತ ವೃದ್ಧೆ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮದಲ್ಲಿ ಮಳೆಯಿಂದಾಗಿ ಹಳ್ಳದಂತಾದ ರಸ್ತೆಗಳಿಂದ ಜನರು ತೊಂದರೆ ಅನುಭವಿಸುವಂತಾಗಿದ್ದು, ಅನಾರೋಗ್ಯ ಪೀಡಿತ ವೃದ್ಧೆಯೋರ್ವರನ್ನು ಜನರು ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ.
ಕಡವಾಡ ಗ್ರಾಮದ 90 ವರ್ಷದ ವೃದ್ಧೆ ಸುಂದರೈ ರಾಮದಾಸ ದೇವಳಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಆದರೆ ಧಾರಾಕಾರ ಮಳೆಯಿಂದಾಗಿ ಮನೆಯ ಮುಂಭಾಗದಲ್ಲಿ ನೀರು ನಿಂತು ರಸ್ತೆ ಹಳ್ಳದಂತಾಗಿದ್ದು, ಯಾವುದೇ ವಾಹನವೂ ಬರುವ ಸ್ಥಿತಿಯಿರಲಿಲ್ಲ. ಕೊನೆಗೆ ನೀರು ತುಂಬಿದ್ದ ರಸ್ತೆಯಲ್ಲಿ ವೃದ್ಧೆಯನ್ನು ಸ್ಥಳೀಯರು ಹೊತ್ತುಕೊಂಡು ಬಂದು ಅಂಬ್ಯುಲೆನ್ಸ್‌ಗೆ ಸ್ಥಳಾಂತರ ಮಾಡಿದ್ದಾರೆ.
ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಯ ಮುಂಭಾಗ ಮಳೆಯ ನೀರು ಜಮಾಯಿಸುವುದರಿಂದ ಜಲಾವೃತ ಪರಿಸ್ಥಿತಿ ಉಂಟಾಗುತ್ತಿದೆ. ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದಿರುವುದರಿಂದ ಈ ಸಮಸ್ಯೆ ಪ್ರತಿವರ್ಷವೂ ಮರುಕಳಿಸುವಂತಾಗಿದೆ.
ಕಡವಾಡ ಗ್ರಾಮದ ಸುಮಾರು ಐದು ಮನೆಗಳ ನಿವಾಸಿಗಳಿಗೆ ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ನರಕಯಾತನೆ ಅನುಭವಿಸುವಂತಾಗಿದ್ದು, ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ನಿವಾಸಿಗಳು ಮಳೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.