ಪದೇ ಪದೇ ಕೈಕೊಡುವ ಕೆಎಸ್ಆರ್‌ಟಿಸಿ ಬಸ್: ಹೈರಾಣಾದ ಕೈಗಾ ಕಾರ್ಮಿಕರಿಂದ ದೂರು
ಪದೇ ಪದೇ ಕೈಕೊಡುವ ಕೆಎಸ್ಆರ್‌ಟಿಸಿ ಬಸ್: ಹೈರಾಣಾದ ಕೈಗಾ ಕಾರ್ಮಿಕರಿಂದ ದೂರು

ಕಾರವಾರ: ಕಾರವಾರದಿಂದ ಕದ್ರಾ ಮಾರ್ಗವಾಗಿ ಕೈಗಾಕ್ಕೆ ತೆರಳುವ ಬಸ್ಸುಗಳಲ್ಲಿ ನಿರಂತರವಾಗಿ ತಾಂತ್ರಿಕ ದೋಷಗಳಿಂದ ಸಮಸ್ಯೆ ಎದುರಾಗುತ್ತಿದ್ದು, ಉದ್ಯೋಗಕ್ಕೆ ತೆರಳಲು ತೀವ್ರ ತೊಂದರೆಯಾಗುತ್ತಿದೆ ಎಂದು ಕೈಗಾದ ಗುತ್ತಿಗೆ ಕಾರ್ಮಿಕರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕೈಗಾಕ್ಕೆ ತೆರಳುವ ಬಸ್ಸಿನಿಂದ ಕಾರ್ಮಿಕರು ಕೆಲಸಕ್ಕೆ ತಡವಾಗಿ ತಲುಪುತ್ತಿರುವುದರಿಂದ ವೇತನದಲ್ಲೂ ಕಡಿತಗೊಳಿಸಲಾಗುತ್ತಿದೆ. 10 ದಿನದ ಹಿಂದೆ ಗೋಪಶಿಟ್ಟಾದಲ್ಲಿ ಬಸ್ಸಿನ ಚಕ್ರ ಸಿಡಿದ ಘಟನೆ, ಮೂರು ದಿನಗಳ ಹಿಂದೆ ಟೈರ್ ಡ್ರಮ್ ಒಡೆದು ಅಪಘಾತದ ಸಂಭವಿಸಿತ್ತು. ರೇಡಿಯೇಟರ್ ದೋಷದಿಂದ ಬಸ್ ರಸ್ತೆ ಮಧ್ಯೆ ನಿಂತಿರುವುದು ಸೇರಿದಂತೆ ಪದೇ ಪದೇ ಈ ರೀತಿಯ ಘಟನೆಗಳು ಸಂಭವಿಸುತ್ತಿವೆ. ಇದರಿಂದ ಬಸ್ ನಂಬಿಕೊಂಡಿರುವ ಕಾರ್ಮಿಕರಲ್ಲಿ ಆತಂಕ ಎದುರಾಗಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಬಸ್ಸುಗಳು ಮಲ್ಲಾಪುರ ಟೌನ್‌ಶಿಪ್ ಮೂಲಕ ಹೋಗುವುದರಿಂದ ಮತ್ತಷ್ಟು ವಿಳಂಬವಾಗುತ್ತಿದೆ. ಈ ಬಸ್ಸನ್ನು ಮಾತ್ರ ಕೈಗಾ ಕಾರ್ಮಿಕರಿಗೆ ಮೀಸಲಾಗಿಸಬೇಕು. ಮಲಾಪುರದಿಂದ ಕಾರವಾರದತ್ತ ರಾತ್ರಿ 8.15ಕ್ಕೆ ಬಿಡುವ ಬಸ್ಸನ್ನು ಕೊರೋನಾ ಸಮಯದಲ್ಲಿ ರದ್ದುಪಡಿಸಿದ್ದು, ಅದನ್ನು ಮತ್ತೆ ಆರಂಭಿಸಬೇಕು ಎಂದು ಕಾರ್ಮಿಕರು ಡಿಪೋ ಮ್ಯಾನೇಜರ್‌ರನ್ನು ಹಲವು ಬಾರಿ ಸಂಪರ್ಕಿಸಿದರೂ ಸ್ಪಂದನೆ ನೀಡಿಲ್ಲ. ಈ ಕುರಿತು ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಿರಣ ಕೊಠಾರಕರ್, ಉಲ್ಲಾಸ ನಾಯ್ಕ, ಕಿರಣ ಆಚಾರಿ, ಆನಂದ ಕೋಬ್ರೇಕರ, ಅಶ್ವಿನಿ ನಾಯ್ಕ, ಶೀತಲ ನಾಯ್ಕ, ಸ್ವಾತಿ ನಾಯ್ಕ ಹಾಗೂ ಇತರರು ಇದ್ದರು.