⁠Political

ಶಕ್ತಿ ಪ್ರದರ್ಶನ ಮಾಡುವಷ್ಟು ಅಶಕ್ತರಲ್ಲ ಸಿದ್ಧರಾಮಯ್ಯ: ದಿನೇಶ ಗುಂಡೂರಾವ್

ಶಕ್ತಿ ಪ್ರದರ್ಶನ ಮಾಡುವಷ್ಟು ಅಶಕ್ತರಲ್ಲ ಸಿದ್ಧರಾಮಯ್ಯ: ದಿನೇಶ ಗುಂಡೂರಾವ್

 

ಕಾರವಾರ: ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಸಿದ್ದರಾಮಯ್ಯ ಅವರು ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ. ಅವರು ಅಷ್ಟು ಅಶಕ್ತರಲ್ಲ‌ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಪ್ರತ್ಯೇಕ ಕಾರ್ಯಕ್ರಮಗಳಿರುತ್ತವೆ. ಹೀಗಾಗಿ ಡಿ.ಕೆ ಶಿವಕುಮಾರ ಅವರು ಶಾಸಕರ ಸಭೆಗೆ ಬಂದಿಲ್ಲ. ಮುಖ್ಯಮಂತ್ರಿ ಅವರು ಶಾಸಕರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅದರಲ್ಲಿ ತಪ್ಪು ಹುಡುಕಬಾರದು. ಅವರಿಗೆ ಶಕ್ತಿ ಪ್ರದರ್ಶನ ಮಾಡುವ ಅಗತ್ಯವಿಲ್ಲ ಎಂದರು.

ಓರ್ವ ಮುಖ್ಯಮಂತ್ರಿ ಇರುವಾಗ ಇನ್ನೋರ್ವ ಮುಖ್ಯಮಂತ್ರಿಯ ಮಾತೇ ಬರಲ್ಲ. ಕೆಲವರು ಅವರ ವೈಯಕ್ತಿಕ ನಿರ್ಧಾರ ತಿಳಿಸಿದ್ದಾರೆ. ಖರ್ಗೆ ಅವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ. ಆದರೆ ನಾನು ಭವಿಷ್ಯ ನುಡಿಯಲು ಸಾಧ್ಯವಿಲ್ಲ ಎಂದು ಸಿಎಂ ಬದಲಾವಣೆ ಕುರಿತು ಮಾತನಾಡಿದರು.

ಪೆಹಲ್ಗಾಮ್ ದಾಳಿಯ ವೈಫಲ್ಯವು ರಾಷ್ಟ್ರ ಮಟ್ಟದ ವಿಚಾರ. ಆದರೆ ಅದರ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡುವುದಿಲ್ಲ. ಪುಲ್ವಾಮಾ ದಾಳಿಯಾದಾಗಲೂ ಅವರದ್ದೇ ಸರಕಾರವಿತ್ತು. ಆದರ ಬಗ್ಗೆಯೂ ಮಾತನಾಡಿಲ್ಲ. ಮೋದಿ ಅವರು ಯಾರಿಗೂ ಉತ್ತರ ಕೊಡಲ್ಲ‌. ಮಾದ್ಯಮದವರು ಪ್ರಶ್ನೆ ಮಾಡೋದಕ್ಕೇ ಮೋದಿ ಅವರು ಸಿಗಲ್ಲ. ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ಪಹಲ್ಗಾಮ್ ವಿಷಯದಲ್ಲಿ ತಾನೇ ಶಾಂತಿ ಸ್ಥಾಪನೆ ಮಾಡಿದ್ದೇನೆ ಎಂದಿದ್ದಾರೆ‌. ಪಾಕಿಸ್ತಾನವು ಭಾರತದ ಐದು ಯುದ್ಧ ವಿಮಾನ ಹೊಡೆದಿದ್ದೇವೆ ಎಂದಿದ್ದಾರೆ. ವಿಶ್ವಗುರು ಎನ್ನುವವರು ಈ ಬಗ್ಗೆ ಉತ್ತರ ಕೊಡಬೇಕು. ಆಗಿದ್ದರೆ ಆಗಿದೆ ಎನ್ನಲಿ, ಇಲ್ಲವೇ ಆಗಿಲ್ಲ ಎಂತಲಾದರೂ ಹೇಳಬೇಕು.

ಆದರೆ ಮೋದಿ, ಅಮಿತ್ ಷಾ ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಈಡಿ, ಐಟಿ, ಚುನಾವಣಾ ಆಯೋಗ ದೇಶ ಕಟ್ಟುವಲ್ಲಿ ನೆರವಾದಂತಹ ಸಂಸ್ಥೆಗಳು, ಆದರೆ ಆ ಎಲ್ಲಾ ಸಂಸ್ಥೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಈಡಿಗೆ ಛೀಮಾರಿ ಹಾಕಿದೆ. ರಾಜ್ಯಕ್ಕೆ ಕೇಂದ್ರ ಸರಕಾರವು ಬರಗಾಲದ ಹಣ ನೀಡಿರಲಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗಿ ನಾವು ಬರಗಾಲದ ಹಣ ಬಿಡಿಕೊಳ್ಳುವಂತಾಯಿತು. ಆದರೆ ಅದರ ಬಗ್ಗೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಯಾಗಲಿ, ಪ್ರಹ್ಲಾದ್ ಜೋಶಿಯಾಗಲಿ ಯಾವ ಸಂಸದರೂ ಮಾತನಾಡಲ್ಲ ಎಂದರು.

ಇನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನನ್ನ ವ್ಯಾಪ್ತಿಗೆ ಬರಲ್ಲ. ಈ ಬಗ್ಗೆ ವೈದ್ಯಕೀಯ ವಿಜ್ಞಾನಗಳ ಸಚಿವ ಶರಣಪ್ರಕಾಶ ಪಾಟೀಲ ಅವರೊಂದಿಗೆ ಮಾತನಾಡುತ್ತೇವೆ. ಮಂಗನ ಕಾಯಿಲೆಗೆ ಶಿರಸಿಯಲ್ಲಿ ಲ್ಯಾಬ್ ತಯಾರಾಗಿದೆ. ಯಂತ್ರಗಳು ಬಂದಿವೆ. ಆದರೆ ತಾಂತ್ರಿಕ ಸಿಬ್ಬಂದಿ ಬೇಕು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!