ಖಾಸಗಿ ಬ್ಯಾಂಕುಗಳ ದಿವಾಳಿತನದಿಂದ ಜನರಿಗೆ ಆತಂಕ: ಡಾ.ಗಜೇಂದ್ರ ನಾಯ್ಕ
ಖಾಸಗಿ ಬ್ಯಾಂಕುಗಳ ದಿವಾಳಿತನದಿಂದ ಜನರಿಗೆ ಆತಂಕ: ಡಾ.ಗಜೇಂದ್ರ ನಾಯ್ಕ

ಕಾರವಾರ: ನೂರಾರು ವರ್ಷಗಳ ಬ್ಯಾಂಕುಗಳೂ ಸಹ ಇತ್ತೀಚಿನ ದಿನಗಳಲ್ಲಿ ದಿವಾಳಿಯಾಗುತ್ತಿರುವುದು ಜನರು ಆತಂಕಗೊಳ್ಳುವಂತಾಗಿದೆ ಎಂದು ಸನಾತನ ಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಗಜೇಂದ್ರ ನಾಯ್ಕ ಹೇಳಿದರು.
ಕಾರವಾರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಸದಾಶಿವಗಢದ ಜೈಅಂಬೆ ದುರ್ಗಾದೇವಿ ಬ್ಯಾಂಕ್‌ಗಳು ಇತ್ತೀಚೆಗೆ ದಿವಾಳಿಯಾಗಿವೆ. ಈ ಬ್ಯಾಂಕುಗಳಲ್ಲಿ ಹಣ ಇಟ್ಟ ಗ್ರಾಹಕರು ಇದೀಗ ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ಹಣ ಇಟ್ಟವರಿಗೂ ಸಹ ಆರ್‌ಬಿಐ ಕೇವಲ 5 ಲಕ್ಷದ ವರೆಗೆ ಮಾತ್ರ ಹಣವನ್ನು ಮರುಪಾವತಿ ಮಾಡುತ್ತಿದೆ. ಇದರಿಂದಾಗಿ ಕಷ್ಟದ ಸಮಯಕ್ಕಾಗಲಿ ಎಂದು ಭವಿಷ್ಯದ ದೃಷ್ಟಿಯಿಂದ ಬ್ಯಾಂಕುಗಳಲ್ಲಿ ಹಣ ಇಟ್ಟವರ ಪಾಡೇನು ಎನ್ನುವಂತಾಗಿದೆ.
ಖಾಸಗಿ, ಸಹಕಾರಿ ಬ್ಯಾಂಕುಗಳ ದಿವಾಳಿಯಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗೆ ಬಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಕಣ್ಣೀರಿಡುತ್ತಿದ್ದು, ಅವರ ಅಳಲನ್ನು ಕೇಳುವವರ್ಯಾರು ಎನ್ನುವುದು ಇದೀಗ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಈ ರೀತಿ ಬ್ಯಾಂಕುಗಳ ದಿವಾಳಿತನದಿಂದ ಕಷ್ಟ ಎದುರಿಸುತ್ತಿರುವ ಜನರಿಗಾಗಿ ಹೋರಾಡಲು ಮುಂದಾಗುತ್ತಿರುವುದಾಗಿ ತಿಳಿಸಿದರು.
ಖಾಸಗಿಯಾಗಿ ಆರಂಭವಾಗುವ ಬ್ಯಾಂಕುಗಳು ತಮ್ಮ ಸಿಬ್ಬಂದಿಗೂ ಸಹ ಆರ್ಥಿಕವಾಗಿ ಶೋಷಣೆ ಮಾಡಿರುವುದು ಬೆಳಕಿಗೆ ಬರುತ್ತಿವೆ. ಉದ್ಯೋಗ ಬೇಕಾದಲ್ಲಿ ಎಫ್‌ಡಿ ಇಡಿ, ಬ್ಯಾಂಕಿಗೆ ಗ್ರಾಹಕರನ್ನು ಮಾಡಿಕೊಡಿ, ಹಣ ಕ್ರೋಢೀಕರಣ ಮಾಡಿಕೊಡಿ ಎನ್ನುವ ಷರತ್ತುಗಳನ್ನು ವಿಧಿಸುತ್ತಿವೆ. ಇದರಿಂದ ಬ್ಯಾಂಕುಗಳಲ್ಲಿ ಕೆಲಸಕ್ಕೆ ಸೇರಲು ಸಾಲ ಮಾಡಿಕೊಂಡು ಶೋಷಣೆ ಅನುಭವಿಸಬೇಕಾದ ಪರಿಸ್ಥಿತಿ ಯುವಜನತೆಗೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ದಿವಾಳಿಯಾದಲ್ಲಿ ಗ್ರಾಹಕರೊಂದಿಗೆ ಸಿಬ್ಬಂದಿಯೂ ಸಹ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ ಎಂದರು.