ಆಸ್ಪತ್ರೆಯಲ್ಲಿ 90 ದಿನಗಳ ಹೋರಾಟದ ಬಳಿಕವೂ ಸೋತು ಹೋದ ಪುಟ್ಟ ಬಾಲಕ
ಆಸ್ಪತ್ರೆಯಲ್ಲಿ 90 ದಿನಗಳ ಹೋರಾಟದ ಬಳಿಕವೂ ಸೋತು ಹೋದ ಪುಟ್ಟ ಬಾಲಕ

!
ಅಂಕೋಲಾ: ಬರೋಬ್ಬರಿ 90 ದಿನಗಳ ಕಾಲ ಆಹಾರವಿಲ್ಲದೆ, ಕೇವಲ ಔಷಧದ ನೆರವಿನಿಂದ ಆಸ್ಪತ್ರೆಯಲ್ಲಿ ಜೀವದೊಂದಿಗೆ ಹೋರಾಟ ನಡೆಸುತ್ತಿದ್ದ ತಾಲ್ಲೂಕಿನ ಅವರ್ಸಾದ ಪುಟ್ಟ ಬಾಲಕ ಆರವ್(11) ನಿನ್ನೆ ರಾತ್ರಿ 12:30ಕ್ಕೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಹೆಚ್ಚಾಗಿ ಸಾಮಾನ್ಯವಾಗಿ ಕಂಡುಬರುವ ಜ್ವರದಿಂದ ಆರಂಭವಾದ ಸಮಸ್ಯೆ, ವೈದ್ಯಕೀಯ ಕ್ಷೇತ್ರಕ್ಕೂ ಸವಾಲಾಗುವ ರೀತಿಯಲ್ಲಿ ಗಂಭೀರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಸಣ್ಣದಾಗಿ ಕಾಣಿಸಿಕೊಂಡ ಈ ಆರೋಗ್ಯ ಸಮಸ್ಯೆ ಏಕಾಏಕಿಯಾಗಿ ಜೀವನ್ಮರಣದ ಸಮಸ್ಯೆಯಾಗಿ ಮಾರ್ಪಟ್ಟಿತು.
ಕಾರವಾರ, ಕುಮಟಾ, ಮಣಿಪಾಲ, ನಿಮ್ಹಾನ್ಸ್ ಸೇರಿದಂತೆ ಹಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಯಾರಿಗೂ ಬಾಲಕನನ್ನು ಗುಣಮುಖನನ್ನಾಗಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬಾಲಕನನ್ನು ಉಳಿಸಲು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಹಾಗೂ ಹಿತೈಷಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಪ್ರತಿಭಾವಂತ ವಿದ್ಯಾರ್ಥಿಯ ಜೀವ ಉಳಿಸಲು ಅವರು ನಡೆಸಿದ ಭಗೀರಥ ಪ್ರಯತ್ನ ವಿಫಲವಾಯಿತು. ವಿಧಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ತಂದೆ ಪಾಂಡುರಂಗ ನಾಯ್ಕ ಹವ್ಯಾಸಿ ಕಲಾವಿದರಾಗಿದ್ದು, ರಿಕ್ಷಾ ಚಾಲಕರಾಗಿದ್ದಾರೆ. ಮಗನನ್ನು ಉಳಿಸಲು ಹೆತ್ತವರು ತಮ್ಮ ಸಾಮರ್ಥ್ಯ ಮೀರಿದ ಹಣವನ್ನು ಖರ್ಚು ಮಾಡಿದ್ದರು. ಆದರೆ ಕ್ರೂರ ವಿಧಿ ಪುಟ್ಟ ಕಂದನತ್ತ ತಿರುಗಿ ನೋಡಲೇ ಇಲ್ಲ. ಕೊನೆಗೂ ಪಾಲಕರ ಶ್ರಮ ವಿಫಲವಾಗಿದ್ದು, ಪುಟ್ಟ ಬಾಲಕ ತನ್ನ ಜೀವನವನ್ನು ಮುಗಿಸಿದ್ದಾನೆ.