ನಾಯಿಗಳ ದಾಳಿಗೆ ಸಿಲುಕಿದ್ದ ಜಿಂಕೆಯ ರಕ್ಷಣೆ
ಮುಂಡಗೋಡ: ಕಾಡಿನಿಂದ ನಾಡಿನತ್ತ ಆಹಾರ ಅರಸಿ ಆಗಮಿಸಿದ್ದ ವೇಳೆ ಬೀದಿನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯನ್ನು ಸ್ಥಳೀಯರು ನೋಡಿ ರಕ್ಷಣೆ ಮಾಡಿದ ಘಟನೆ ತಾಲ್ಲೂಕಿನ ಸನವಳ್ಳಿ ಗ್ರಾಮದ ಬಳಿ ನಡೆದಿದೆ.
ನಾಡಿನತ್ತ ಆಗಮಿಸಿದ್ದ ಜಿಂಕೆಯ ಮೇಲೆ ದಾಳಿ ನಡೆಸಿದ್ದ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ್ದು, ಆತಂಕಗೊಂಡಿದ್ದ ಜಿಂಕೆ ನೆರವಿಗಾಗಿ ಕೂಗಾಡುತ್ತಿತ್ತು. ಈ ವೇಳೆ ಗ್ರಾಮಸ್ಥರು ಓಡಿ ಹೋಗಿ ಬೀದಿನಾಯಿಗಳನ್ನು ಬೆದರಿಸಿ ಓಡಿಸಿ ಜಿಂಕೆಯನ್ನು ರಕ್ಷಣೆ ಮಾಡಿದರು.
ನಾಯಿಗಳ ದಾಳಿಯಿಂದ ಗಾಯಗೊಂಡ ಪರಿಣಾಮ ಜಿಂಕೆಯು ಓಡಾಡಲಾಗದೇ ಬಿದ್ದು ನರಳಾತ್ತಿದ್ದು, ಗ್ರಾಮಸ್ಥರು ಜಿಂಕೆಗೆ ನೀರು ಕುಡಿಸಿ ಆರೈಕೆ ಮಾಡಿದ್ದರು. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅರಣ್ಯ ಸಿಬ್ಬಂದಿಗೆ ಒಪ್ಪಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜು ಗುಬ್ಬಕ್ಕನವರ, ಸುರೇಶ ಕೇರಿಹೊಲದವರ, ಆನಂದ ಜಮ್ಮಕ್ಕನವರ, ಬಸವರಾಜ ಅರಿಶೀಣಗೆರಿ, ಅರಣ್ಯ ಇಲಾಖೆಯ ಸಿಬ್ಬಂದಿ ರಾಜು ಪರೇಟ್ ಗೆ ಜಿಂಕೆಯನ್ನು ಒಪ್ಪಿಸಿದ್ದಾರೆ.