ಕುಳಗಿ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಶಾಕ್‌ನಿಂದ ಆನೆ ಸಾವು!
ಕುಳಗಿ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಶಾಕ್‌ನಿಂದ ಆನೆ ಸಾವು!

ದಾಂಡೇಲಿ: ವನ್ಯಜೀವಿ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕುಳಗಿ-ಅಂಬಿಕಾನಗರ ರಸ್ತೆಯ ಕುಳಗಿ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯೊಂದು ಆಕಸ್ಮಿಕವಾಗಿ ಮೃತಪಟ್ಟ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಳಗಿ ವನ್ಯಜೀವಿ ಇಲಾಖೆಯ ಸಿಬ್ಬಂದಿ ಮಂಗಳವಾರ ಸಂಜೆ ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ ಆನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಲಭ್ಯವಾದ ಮಾಹಿತಿಯ ಪ್ರಕಾರ ಆನೆ ಸಾಗುವಾನಿ ಮರಕ್ಕೆ ಬೆನ್ನು ಉಜ್ಜಿಕೊಳ್ಳುವ ಸಂದರ್ಭದಲ್ಲಿ, ಮರ ಅಲುಗಾಡಿ ಮರದ ಮೇಲ್ಗಡೆಯಿಂದ ಹಾದು ಹೋಗಿದ್ದ ಹೈ ಟೆನ್ಶನ್ ವಿದ್ಯುತ್ ತಂತಿಗೆ ಮರಕ್ಕೆ ತಾಗಿರುವುದರಿಂದ, ಆನೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮೃತ ಆನೆ ಹೆಣ್ಣಾನೆಯಾಗಿದ್ದು, 14 ರಿಂದ 15 ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವನ್ಯಜೀವಿ ಇಲಾಖೆಯ ನಿರ್ದೇಶಕ ನಿಲೇಶ ಶಿಂಧೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಕಳ್ಳಿಮಠ, ಕುಳಗಿ ವಲಯಾರಣ್ಯಾಧಿಕಾರಿ ಸಾಗರ್ ಹಾಗೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ ಮೃತ ಆನೆಯ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.