ದಾಂಡೇಲಿಯಲ್ಲಿ ಹಣಕ್ಕೆ ಬೇಡಿಕೆಯಿಟ್ಟ ಹುಬ್ಬಳ್ಳಿ ಮೂಲದ ಮೂವರು ನಕಲಿ ಪತ್ರಕರ್ತರು ವಶ
ದಾಂಡೇಲಿಯಲ್ಲಿ ಹಣಕ್ಕೆ ಬೇಡಿಕೆಯಿಟ್ಟ ಹುಬ್ಬಳ್ಳಿ ಮೂಲದ ಮೂವರು ನಕಲಿ ಪತ್ರಕರ್ತರು ವಶ

ದಾಂಡೇಲಿ: ನಗರದ ಲೆನಿನ್ ರಸ್ತೆಯಲ್ಲಿ ವೈದ್ಯ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವ ವ್ಯಕ್ತಿಯೊಬ್ಬರಿಗೆ ನೀನು ನಕಲಿ ವೈದ್ಯನಿದ್ದಿ ಎಂದು ಬೆದರಿಕೆಯನ್ನೊಡ್ಡಿ 2.5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ ಹುಬ್ಬಳ್ಳಿ ಮೂಲದ ಮೂವರು ನಕಲಿ ಪತ್ರಕರ್ತರ ವಿರುದ್ದ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾದ ಕೆಲವೇ ಹೊತ್ತಿನಲ್ಲಿ ಆ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿ ಮೂಲದ ವಿಜಯ ಶಂಕರ ಮೇತ್ರಾಣಿ, ಧರ್ಮರಾಜ ನಾರಾಯಣ ಕಠಾರೆ ಮತ್ತು ಸತೀಶ್ ಭಾಗವಾನ್ ಕೇದಾರಿ ಎಂಬ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರು ನಾವು ಹುಬ್ಬಳ್ಳಿಯ ವಿಜಯ9 ನ್ಯೂಸ್ ನವರೆಂದು ಹೇಳಿಕೊಂಡು ದಾಂಡೇಲಿಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಕೃತಿ ಚಿಕಿತ್ಸಕರೆಂದಿರುವ ನಗರದ ಲೆನಿನ್ ರಸ್ತೆಯಲ್ಲಿರುವ ಅಶೋಕ ಶಂಭು ಫರಬ ಅವರ ಕ್ಲಿನಿಕಿಗೆ ಬಂದು, ನೀನು ನಕಲಿ ವೈದ್ಯನಿದ್ದು, ನಿನ್ನ ಬಗ್ಗೆ ನ್ಯೂಸ್ ಮಾಡಿ ನಮ್ಮ ಚಾನೆಲ್ ನಲ್ಲಿ ಹಾಕುತ್ತೇವೆ ಅಂತ ಹೇಳಿ ಹೆದರಿಸಿ ವಿಜಯ 9 ನ್ಯೂಸ್ ಎಂದು ಯೂಟ್ಯೂಬ್ ಚಾನೆಲ್ ನಲ್ಲಿ ವರದಿ ಪ್ರಸಾರ ಮಾಡಿದ್ದಾರೆ.
ಆನಂತರ ಅಶೋಕ ಶಂಭು ಫರಬ ಅವರಿಗೆ ಕರೆ ಮಾಡಿ ಈಗಾಗಲೇ ಸಣ್ಣ ಚಾನೆಲ್ ನಲ್ಲಿ ಸುದ್ದಿ ಪ್ರಸಾರ ಮಾಡಿದ್ದೇವೆ. ನೀನು ನಮಗೆ 2.5 ಲಕ್ಷ ರೂ. ಕೊಡದಿದ್ದರೆ ದೊಡ್ಡ ದೊಡ್ಡ ಚಾನೆಲ್‌ಗಳಲ್ಲಿ ಸುದ್ದಿಯನ್ನು ಪ್ರಸಾರ ಮಾಡುತ್ತೇವೆ. ಮತ್ತು ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಗೃಹ ಸಚಿವರಿಗೆ ವಿಡಿಯೋ ಕಳುಹಿಸಿ ನಿನ್ನ ಜೀವನವನ್ನು ಹಾಳು ಮಾಡುತ್ತೇವೆ ಅಂತ ಪದೇಪದೇ ಕರೆ ಮಾಡಿ ಹಣ ಕೊಡುವಂತೆ ಹೆದರಿಸುತ್ತಿದ್ದರು.
ಅದೇ ರೀತಿ ಭಾನುವಾರ ಮಧ್ಯಾಹ್ನ ಮತ್ತೆ ಅಶೋಕ ಶಂಭು ಫರಬ ಅವರ ಕ್ಲಿನಿಕಿಗೆ ಬಂದು ಹಣ ಕೊಡುವಂತೆ ಹೆದರಿಸಿ ಬೆದರಿಸಿದ್ದಾರೆಂದು ಅಶೋಕ ಶಂಭು ಫರಬ ಅವರು ನಗರ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದರು.
ದೂರು ಸ್ವೀಕರಿಸಿ ತನಿಖೆಗಿಳಿದ ನಗರ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ಕಿರಣ್.ಬಿ.ಪಾಟೀಲ್ ಅವರು ತಕ್ಷಣವೇ ಈ ಮೂವರು ನಕಲಿ ಪತ್ರಕರ್ತರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.